ಬದುಕಿನ ಸಾರ್ಥಕತೆಗೆ ಧರ್ಮ ಮಾರ್ಗ, ಪರೋಪಕಾರ

Davangere, Vijayadashami, Ambuchchedana,
Published on

ದಾವಣಗೆರೆ: ಧರ್ಮ ಮಾರ್ಗದಲ್ಲಿ ಸಾಗಿ ಪರೋಪಕಾರದ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಪೋಕ್ಷೇತ್ರ ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದು ಪರಿಷತ್ ವತಿಯಿಂದ ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ವಿಜಯದಶಮಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಜೀವನದುದ್ದಕ್ಕೂ ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಅದೇ ನಮಗೆ ರಕ್ಷಾ ಕವಚವಾಗುತ್ತದೆ. ದೇವರಿದ್ದಾನೆ, ಮೃತ್ಯು ನಿಶ್ಚಿತ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ನಾವು ಮಾಡಿದ ಉಪಕಾರ, ಬೇರೆಯವರು ನಮಗೆ ಮಾಡಿದ ಅಪಕಾರಗಳನ್ನು ಮರೆಯಬೇಕು ಎಂದು ತಿಳಿಸಿದರು.

ತಂದೆ, ತಾಯಿ, ಗುರುಗಳು, ಕುಲದೈವ, ದೇಶಕ್ಕೆ ನಾವು ಕೃತಜ್ಞರಾಗಿರಬೇಕು. ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಸಂಪ್ರದಾಯ, ಅಧ್ಯಾತ್ಮಗಳು ವಿಶಿಷ್ಟವಾಗಿವೆ. ಅವುಗಳಿಂದಾಗಿಯೇ ಭಾರತ ವಿಶ್ವ ಗುರುವಾಗಿದೆ ಎಂದರು.

ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಮಿತಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಪರಮ ವೈಭವದ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ ಎಂದು ಹೇಳಿದರು.

ನಮ್ಮೆಲ್ಲರೊಳಗೆ ದೇವರು, ರಾಕ್ಷಸರು ಇಬ್ಬರೂ ಇದ್ದಾರೆ. ಅಸುರಿ ಶಕ್ತಿಯನ್ನು ನಾಶ ಮಾಡಿ ಪರಿಶುದ್ಧರಾಗೋಣ, ದೈವೀ ಶಕ್ತಿಯನ್ನು ಉದ್ದೀಪನಗೊಳಿಸೋಣ. ಸಮಾಜವನ್ನೂ ಪರಿಶುದ್ಧಗೊಳಿಸೋಣ ಎಂದು ತಿಳಿಸಿದರು.

ದ್ವೇಷ, ಅಸೂಯೆ, ಮತ್ಸರಗಳನ್ನು ಬಿಡೋಣ. ಸಮಾಜವನ್ನು ಜಾತಿ, ಮತ, ವರ್ಗ, ಭಾಷೆ, ದೇವರ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳನ್ನು ದೂರವಿಟ್ಟು ಸಾಮರಸ್ಯದ ಬದುಕು ಸಾಗಿಸೋಣ ಎಂದರು.

ಭಾರತದ ಕುಟುಂಬ ಪದ್ಧತಿ, ಸಾವಯವ ಕೃಷಿ, ಆಯುರ್ವೇದ, ಗುರುಕುಲ ಪದ್ಧತಿಯ ಕಡೆಗೆ ಇಡೀ ಜಗತ್ತು ನೋಡುತ್ತಿದೆ. ಹಿಂದು ಸಮಾಜ ಶಕ್ತಿಯುತವಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಪೊಲೀಸರಂತೆ ದೀಕ್ಷೆ ತೊಡಬೇಕು ಎಂದು ಹೇಳಿದರು.

ಅಂಬುಛೇದನ ಮಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ವಿಜಯದಶಮಿಗೆ ಸಾವಿರಾರು ವರ್ಷಗಳ ಪರಂಪರೆಯಿದೆ. ಪೌರಾಣಿಕ ಹಿನ್ನೆಲೆಯಲ್ಲಿ ಅದನ್ನು ಆಚರಿಸುತ್ತೇವೆ. ಕಲೆ, ಸಾಹಿತ್ಯ, ಸಂಭ್ರಮವನ್ನು ಇದು ಒಳಗೊಂಡಿದೆ ಎಂದು ಹೇಳಿದರು.

ಕರೊನಾ ಸಂಕಷ್ಟವನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ನಮ್ಮ ಆಂತರಿಕ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಶಕ್ತಿಯನ್ನು ದೇವಿಯು ನೀಡಲಿ ಎಂದು ಪ್ರಾರ್ಥಿಸಿದರು.

ಸಮಾಜದ ಮುಖಂಡ ಜೆ.ಕೆ.ಕೊಟ್ರಬಸಪ್ಪ, ಸತೀಶ ಪೂಜಾರಿ ಮಾತನಾಡಿದರು. ಮೇಯರ್ ಆರ್.ಜಯಮ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇದ್ದರು. ಎನ್.ರಾಜಶೇಖರ್ ಸ್ವಾಗತಿಸಿದರು, ಶಿವನಗೌಡ ಪಾಟೀಲ್ ವಂದಿಸಿದರು, ಗಿರೀಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net