

ದಾವಣಗೆರೆ: ಜಗಳೂರು ತಾಲೂಕಿನ ಉದ್ದಗಟ್ಟ, ಹಿರೇಮಲ್ಲನಹೊಳೆ, ಹುಚ್ಚವ್ವನಹಳ್ಳಿ ಗ್ರಾಮಗಳಿಗೆ ಶನಿವಾರ ಬಿಜೆಪಿ ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ ಮತ್ತು ಎಚ್.ಪಿ. ರಾಜೇಶ್ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಿರಾಶ್ರಿತರ ಸಮಸ್ಯೆ ಆಲಿಸಿದರು.
ಉದ್ದಗಟ್ಟ ಗ್ರಾಮದಲ್ಲಿ 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಜನ ಜೀವನ ಅಸ್ತವ್ಯಸ್ಥಗೊಂಡಿದ್ದರಿಂದ ಗ್ರಾಮಕ್ಕೆ ಭೇಟಿ ನೀಡಿ, ವಾಸ್ತವ ಸ್ಥಿತಿ ಪರಿಶೀಲಿಸಿದರು.
ಅನೇಕ ವರ್ಷಗಳ ನಂತರ ಭಾರಿ ಮಳೆಯಾಗಿದ್ದು, ಕೆರೆಕಟ್ಟೆಗಳಲ್ಲಿ ನೀರು ತುಂಬಿ ಗ್ರಾಮಗಳಿಗೆ ನುಗ್ಗಿದೆ. ಮನೆ ಕಳೆದುಕೊಂಡವರು ಆತಂಕಪಡುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ. ಸಂಬಂಧಿಸಿದ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ ವಸತಿ, ಊಟವಿಲ್ಲದರಿಗೆ ಗಂಜಿ ಕೇಂದ್ರ ತೆರೆದು ಆಹಾರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಧೈರ್ಯ ತುಂಬಿದರು.
ನಂತರ ಹಿರೇಮಲ್ಲನಹೊಳೆ ಗ್ರಾಮಕ್ಕೆ ತೆರಳಿ ಕೆರೆ ಮತ್ತು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಈಗಾಗಲೇ ಕಂದಾಯ ಸಚಿವರು ಭೇಟಿ ನೀಡಿ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಾತ್ಕಾಲಿಕವಾಗಿ ತೆರದಿರುವ ಕಾಳಜಿ ಕೇಂದ್ರದಲ್ಲಿದ್ದು, ಅಧಿಕಾರಿಗಳು ನೀಡುವ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ಬದುಕು ರೂಪಿಸಿಕೊಳ್ಳುವಂತೆ ತಿಳಿಸಿದರು. ನಂತರ, ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಬೆಳೆ ಪರಿಶೀಲಿಸಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ 50 ವರ್ಷಗಳ ನಂತರ ಭೀಕರ ಮಳೆಯಾಗಿದೆ. ತುಂಗಭದ್ರಾ ನದಿಯಿಂದ 57 ಕೆರೆಗೆ ನೀರು ಬರುತ್ತಿದೆ. ನಿರಾಶ್ರಿತರಿಗೆ ಶಾಶ್ವತವಾದ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ತಾಲೂಕಿನ ಬಹುತೇಕ ಕೆರೆ, ಕಟ್ಟೆ, ಚೆಕ್ ಡ್ಯಾಂಗಳಲ್ಲಿ ನೀರು ತುಂಬಿದೆ. ಜತೆಗೆ ಬೆಳೆ ನಷ್ಟವಾದ ರೈತರಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ನೀರು ತುಂಬಿ ಜನರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಆದರೆ, ಕೆಲವು ಗ್ರಾಮಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಈವರೆಗೂ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದರು.
ಉದ್ದಗಟ್ಟದಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಶಾಲೆ ಅಥವಾ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆದು ಊಟದ ವ್ಯವಸ್ಥೆ ತುರ್ತಾಗಿ ಮಾಡಬೇಕು. ಎಲ್ಲ ಕುಟುಂಬ ಸ್ಥಳಾಂತರಿಸಿ ಶಾಶ್ವತವಾಗಿ ಒಂದು ಕಡೆ ನಿವೇಶನ ನೀಡುವ ಕೆಲಸವನ್ನು ತಾಲೂಕು ಆಡಳಿತ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಕುಬೇಂದ್ರಪ್ಪ, ಬಿಜೆಪಿ ಮುಖಂಡರಾದ ಬಿಸ್ತುವಳ್ಳಿ ಬಾಬು, ಮರುಳಾರಾಧ್ಯ, ಇಂದ್ರೇಶ್, ಅರವಿಂದ್ ಪಾಟೀಲ್, ಸೂರಲಿಂಗಪ್ಪ, ಬಾಣೇಶ್, ರಘು ಜಾಗ್ವಾರ್ ಸೇರಿದಂತೆ ಮತ್ತಿತರರಿದ್ದರು.
---