

ದಾವಣಗೆರೆ: ರಾಮಕೃಷ್ಣ ಹೆಗಡೆ ನಗರದಿಂದ ಸ್ಥಳಾಂತರಿಸಲ್ಪಟ್ಟ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸುವ ಬೇಡಿಕೆ ವರ್ಷವಾದರೂ ಈಡೇರಿಲ್ಲ ಎಂದು ಅಸಮಾಧಾನಗೊಂಡ ಸಂತ್ರಸ್ತರು ನಗರಪಾಲಿಕೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ವರ್ತುಲ ರಸ್ತೆ ಕಾಮಗಾರಿ ಸಂಬಂಧ, 2023ರ ಡಿಸೆಂಬರ್‌ನಲ್ಲಿ ಮಾಗಾನಹಳ್ಳಿ ರಸ್ತೆಯ ರಾಮಕೃಷ್ಣ ಹೆಗಡೆ ನಗರದಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು.
ತದನಂತರ ಕೊಂಡಜ್ಜಿ ರಸ್ತೆಯ ಕೇಂದ್ರೀಯ ಶಾಲೆ ಬಳಿ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಟ್ಟಿದ್ದರೂ ಮೂಲ ಸೌಕರ್ಯಗಳನ್ನು ಒದಗಿಸದಿರುವ ಬಗ್ಗೆ ಜನರಲ್ಲಿ ಅಸಮಾಧಾನವಿತ್ತು. ಮಳೆಗಾಲದಲ್ಲಿ ತಗಡು ಶೀಟುಗಳು ನೆಲಕ್ಕುರುಳಿ ಅನಾಹುತವಾಗಿತ್ತು.
ಒಂಬತ್ತು ತಿಂಗಳ ಹಿಂದಷ್ಟೇ ಬೊಂಬು, ಬಾಗಿಲು, ಮರದ ಸಾಮಗ್ರಿಗಳೊಂದಿಗೆ ಹೆಗಡೆ ನಗರಕ್ಕೆ ದೌಡಾಯಿಸಿದ್ದ ನಿವಾಸಿಗಳು ಇಲ್ಲಿಯೇ ಮೊದಲಿನಂತೆಯೇ ವಾಸ ಮಾಡುತ್ತೇವೆ ಎಂದು ಹೇಳಿ, ಮಳೆಯಲ್ಲೂ ಪ್ರತಿಭಟನೆ ನಡೆಸಿ ಪಾಲಿಕೆಗೆ ಎಚ್ಚರಿಕೆ ನೀಡಿದ್ದರು.
ಅಲ್ಲಿಂದೀಚೆಗೆ ಸ್ಥಳಾಂತರಗೊಂಡ 420 ಜನರಿಗೆ ಶಾಶ್ವತ ಸೂರು ಕಲ್ಪಿಸುವ ಭರವಸೆ ಈಡೇರಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಸಂತ್ರಸ್ತರು ಮತ್ತೆ ಮಂಗಳವಾರ ಪಾಲಿಕೆ ಎದುರು ದಿಢೀರ್ ಧರಣಿ ನಡೆಸಿದರು.
13 ತಿಂಗಳಾದರೂ ನಮಗೆ ಮನೆ ಕಟ್ಟಿಸಿಕೊಟ್ಟಿಲ್ಲ. ರಸ್ತೆ ನಿರ್ಮಾಣಕ್ಕೆ ಆಡಳಿತಶಾಹಿ ತೋರುವ ಆಸಕ್ತಿಯನ್ನು ಮನೆ ಕಟ್ಟಿಸಿಕೊಡುವತ್ತ ತೋರುತ್ತಿಲ್ಲ. ನಾವು ವಿವಿಧೆಡೆ ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದೆ. ಪದೇ ಪದೇ ಮಕ್ಕಳೊಂದಿಗೆ ಬಂದು ಪ್ರತಿಭಟನೆ ಕೂರುವುದೇ ನಮ್ಮ ಕೆಲಸವಾಗಿದೆ ಎಂದು ಮಹಿಳಾ ಸಂತ್ರಸ್ತರು ಕಿಡಿಕಾರಿದರು. ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಕೂತರು. ನಾಲ್ಕು ತಾಸುಗಳ ಕಾಲ ಪಾಲಿಕೆ ಎದುರು ಧರಣಿ ನಡೆಸಿದರು.
ಹೆಗಡೆ ನಗರದ ಕೆಲ ಮುಖಂಡರೊಂದಿಗೆ ಮೇಯರ್ ಕೆ. ಚಮನ್‌ಸಾಬ್ ಪ್ರತ್ಯೇಕ ಚರ್ಚೆ ನಡೆಸಿದರು. ನಿಮಗೆ ವಸತಿ ಕಲ್ಪಿಸುವ ಕಡತ ಸಚಿವ ಜಮೀರ್ ಅಹ್ಮದ್ ಅವರ ಬಳಿಯೇ ಇದೆ. ಇದಕ್ಕಾಗಿ ಮೀಸಲಿಟ್ಟ ಅನುದಾನ ಸರ್ಕಾರದಿಂದ ಬಂದಿಲ್ಲ. ನಿವಾಸಿಗಳು ಬಂದಲ್ಲಿ ಎರಡು ಬಸ್‌ಗಳಲ್ಲಿ ಸಚಿವ ಜಮೀರ್ ಅಹ್ಮದ್ ಅವರ ನಿವಾಸಕ್ಕೆ ನಿಯೋಗ ತೆರಳಿ ಮನವರಿಕೆ ಮಾಡಿಕೊಡೋಣ ಎಂದು ಮೇಯರ್ ಸಲಹೆ ನೀಡಿದರು.
ಪ್ರತಿಭಟನಾಕಾರರ ಬಳಿಯೂ ಬಂದು ಮಾತನಾಡಿದ ಮೇಯರ್, ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಫೆ. 10ರಂದು ದಾವಣಗೆರೆಗೆ ಬರಲಿದ್ದು, ನಂತರದಲ್ಲಿ ಅವರೊಂದಿಗೆ ಚರ್ಚಿಸಿ ಶಾಶ್ವತ ಸೂರಿನ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೊಂಡಜ್ಜಿ ರಸ್ತೆಯಲ್ಲಿ ಸ್ಥಳಾಂತರಗೊಂಡ ಜಾಗದಲ್ಲಿ 30 ಅಡಿ ರಸ್ತೆ ನಿರ್ಮಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಗುತ್ತಿಗೆದಾರರು ಒಂದಿಂಚೂ ಬದಲಾವಣೆ ಮಾಡಿದರೆ ಅವಕಾಶ ಕೊಡುವುದಿಲ್ಲ. ಮಾರ್ಕಿಂಗ್ ಮಾಡಿ ಕಾಮಗಾರಿ ನಡೆಸಲು ಇಂಜಿನಿಯರ್‌ಗೆ ಸೂಚಿಸಲಾಗುವುದು ಎಂದು ಹೇಳಿದರು.
ಫೆ. 15ರೊಳಗೆ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಮತ್ತೆ ನಗರಪಾಲಿಕೆ ಎದುರು ಉಪವಾಸ ಧರಣಿ ನಡೆಸುವುದಾಗಿ ಮುಖಂಡರು ಪಾಲಿಕೆಗೆ ಎಚ್ಚರಿಕೆ ನೀಡಿದರು. ಅಹ್ಮದ್‌ಖಾನ್, ಹಸೇನ್‌ಸಾಬ್, ಕೊಡಪಾನ ದಾದಾಪೀರ್, ಎಂ.ಆರ್. ಸಿದ್ದೇಶ್ ಹಾಗೂ ಸಂತ್ರಸ್ತ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.