ಭೂ ಕಬಳಿಕೆ ಸ್ಥಳ ಪರಿಶೀಲಿಸಿದ ತನಿಖಾ ತಂಡ

1001280508.jpg
Published on

ದಾವಣಗೆರೆ: ಶಾಮನೂರು ಶುಗರ್ಸ್ ಕಾರ್ಖಾನೆ ನಡೆಸಿದೆ ಎನ್ನಲಾದ ಭೂ ಕಬಳಿಕೆ ಹಾಗೂ ಹಳ್ಳದ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಸೂಚನೆಯಂತೆ ನೇಮಿತ ತನಿಖಾ ತಂಡ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿತು.

ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹ್ಮದ್ ನೇತೃತ್ವದ ಅಧಿಕಾರಿಗಳ ತನಿಖಾ ತಂಡ, ಚಿಕ್ಕಬಿದರಿ ಹಾಗೂ ವಟ್ಲಹಳ್ಳಿಗೆ ತೆರಳಿ ಸ್ಥಳ ಮಹಜರು ನಡೆಸಿತು. ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳ ಗಡಿ ಭಾಗದಲ್ಲಿ ಭೂ ಕಬಳಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿತು. ನ.10ರಿಂದ ಮೂರು ದಿನಗಳ ಕಾಲ ಅಧಿಕೃತ ಸರ್ವೇ ನಡೆಸಲು ನಿರ್ಧರಿಸಿತು.

ಹರಿಹರ ತಾಲೂಕಿನ ಚಿಕ್ಕಬಿದರಿ ಹಾಗೂ ಹರಪನಹಳ್ಳಿ ತಾಲೂಕಿನ ಕಡತಿ, ದುಗ್ಗಾವತಿ ಗ್ರಾಮಗಳಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಒತ್ತುವರಿ ಮಾಡಿದ್ದ ಬಗ್ಗೆ ಆರೋಪಿಸಿ ಶಾಸಕ ಬಿ.ಪಿ.ಹರೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅದರಂತೆ ಜಂಟಿ ಸಮೀಕ್ಷೆಗೆ ಕಾರ್ಯದರ್ಶಿ ಆದೇಶಿಸಿದ್ದರು.

ಅದರಂತೆ ನಿಸಾರ್ ಅಹ್ಮದ್ ಅವರೊಂದಿಗೆ ತನಿಖಾ ತಂಡದ ಇತರೆ ಸದಸ್ಯರಾದ ಚಿತ್ರದುರ್ಗ ಜಿಲ್ಲೆ ಭೂ ದಾಖಲೆಗಳ ಉಪನಿರ್ದೇಶಕ ಬಿ. ರಾಮಾಂಜನೇಯ, ಚಳ್ಳಕೆರೆ ತಾಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕ ಬಿ.ಎಸ್.ಬಾಬು ಹಾಗೂ ದಾವಣಗೆರೆ ಡಿಡಿಎಲ್‌ಆರ್ ಭಾಗ್ಯಾ, ಹರಿಹರ ಎಡಿಎಲ್‌ಆರ್ ಕಲ್ಲೇಶ್, ಹರಪನಹಳ್ಳಿ ಎಡಿಎಲ್‌ಆರ್ ಸ್ಥಳಕ್ಕೆ ಭೇಟಿ ನೀಡಿದರು.

ವೈಜ್ಞಾನಿಕವಾಗಿ ಯಾವುದೇ ತೊಂದರೆ ಆಗದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಜಂಟಿ ಸಮೀಕ್ಷೆ ಸರ್ವೇ ನಡೆಸಲಾಗುವುದು. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುವುದು. ಸರ್ವೇ ನಂತರವೇ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ನಿಸಾರ್ ಅಹ್ಮದ್ ಸ್ಪಷ್ಟಪಡಿಸಿದರು.

ಜಯ ಸಿಗುವ ವಿಶ್ವಾಸ

ಭೂ ಕಬಳಿಕೆ ವಿಚಾರವಾಗಿ ನಾನು ಸಲ್ಲಿಸಿದ್ದ ದೂರಿನನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತನಿಖಾ ತಂಡ ನೇಮಿಸಿದ್ದಾರೆ. ಈ ತಂಡದ ಮೇಲೆ ಸಂಪೂರ್ಣ ಭರವಸೆ ಇದೆ. ಸತ್ಯಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದು ಶಾಸಕ ಬಿ.ಪಿ. ಹರೀಶ್ ಪ್ರತಿಕ್ರಿಯಿಸಿದರು.

ಶಾಮನೂರು ಕುಟುಂಬ ರೈತರ ಹಾಗೂ ಅರಣ್ಯ ಭೂಮಿ ಕಬಳಿಸಿದೆ ಎಂದು ಆರೋಪಿಸಿದ್ದೆ. ಹರಿಹರ ತಾಲೂಕಿನ ಚಿಕ್ಕಬಿದರಿ ಬಳಿಯಲ್ಲಿ ಹಳ್ಳ ಒತ್ತುವರಿ ಮಾಡಿದ್ದರ ಸಂಬಂಧ ದಾಖಲೆ ಸಹಿತ ದೂರು ನೀಡಿದ್ದೆ. ನವೆಂಬರ್‌ನಲ್ಲಿ ಸರ್ವೇ ನಡೆಯಲಿದ್ದು ಆನಂತರವೇ ಸತ್ಯ ಹೊರಬರಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net