ಹತ್ಯೆ ವಿರೋಧಿಸಿ ವೀರಶೈವರ ಪ್ರತಿಭಟನೆ     ಮೇಣದಬತ್ತಿ ಹೊತ್ತಿಸಿ ನಮನ ಸಲ್ಲಿಕೆ

1000190465.jpg
Published on

ದಾವಣಗೆರೆ: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಖಂಡಿಸಿ, ವೀರಶೈವ ಜಂಗಮ ಸಮಾಜದಿಂದ ನಗರದ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೇಣದ ಬತ್ತಿಗಳನ್ನು ಹೊತ್ತಿಸಿ ನಮನ ಸಲ್ಲಿಸಲಾಯಿತು.
ಹಂತಕ ಚಿತ್ರನಟ ದರ್ಶನ್ ವಿರುದ್ಧ ಧಿಕ್ಕಾರ ಕೂಗಿದ ಮುಖಂಡರು, ದರ್ಶನ್ ರಾಜ್ಯ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು. ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ತಪ್ಪಿತಸ್ಥರಿಗೆ ಮರಣದಂಡನೆ ಆಗಬೇಕು ಎಂದೂ ಒತ್ತಾಯಿಸಿದರು.
ಸಮಾಜದ ಮುಖಂಡ ಎನ್.ಎ. ಮುರುಗೇಶ್ ಆರಾಧ್ಯ ಮಾತನಾಡಿ, ನಟ ದರ್ಶನ್ ಮತ್ತು ಡಿ ಗ್ಯಾಂಗ್ ರೇಣುಕಸ್ವಾಮಿಗೆ ಚಿತ್ರಹಿಂಸೆ ನೀಡಿ, ಕೊಲೆ ಮಾಡಿರುವುದು ಖಂಡನೀಯ. ದರ್ಶನ್ ಪ್ರಭಾವಿಯಾಗಿದ್ದರೂ ಆತನನ್ನು ಬಂಧಿಸುವ ಮೂಲಕ ಪೊಲೀಸರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಸಾಹಿತಿ ಬಾ.ಮ. ಬಸವರಾಜಯ್ಯ ಮಾತನಾಡಿ, ಸಿನಿಮಾಗಳ ಕ್ರೌರ್ಯದಿಂದ ಯುವಜನರು ದಾರಿ ತಪ್ಪುತ್ತಿದ್ದು ಕೊಲೆಗಳು ಹೆಚ್ಚಿವೆ.  ಉಭಯ ಸರ್ಕಾರಗಳು ಕ್ರೌರ್ಯ ವೈಭವೀಕರಿಸುವ ಸಿನಿಮಾ, ಧಾರಾವಾಹಿಗಳ ಮೇಲೆ ನಿಷೇಧ ಹೇರಬೇಕು. ಸೆನ್ಸಾರ್ ಮಂಡಳಿ ಇಂತಹ ಚಿತ್ರಗಳಿಗೆ ಅನುಮತಿ ನೀಡಬಾರದು. ರೇಣುಕಸ್ವಾಮಿ ಕುಟುಂಬಕ್ಕೆ ಸಮಾಜದಿಂದ ಆರ್ಥಿಕ ನೆರವು ನೀಡಬೇಕು ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯ ಎಚ್.ಎಂ. ರುದ್ರಮುನಿಸ್ವಾಮಿ ಮಾತನಾಡಿ ರೇಣುಕಸ್ವಾಮಿ ತಪ್ಪೆಸಗಿದ್ದಲ್ಲಿ ಪೊಲೀಸರ ಮೂಲಕ ತಿದ್ದಿ ಬುದ್ದಿ ಹೇಳಬಹುದಾಗಿತ್ತು. ಆದರೆ ಸೆಲೆಬ್ರಿಟಿ ದರ್ಶನ್ ಮತ್ತು ಅವರ ತಂಡ ತೋರಿಸಿದ ಕ್ರೂರತನ, ಹಿಂಸಾ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎ.ಎಂ. ಕೊಟ್ರೇಶ್, ಪಿ.ಜಿ. ರಾಜಶೇಖರ್, ಮಟ್ಟಿಕಲ್ ವೀರಭದ್ರಸ್ವಾಮಿ, ಬನ್ನಯ್ಯಸ್ವಾಮಿ, ಶಂಕರ್‌ಗೌಡ ಬಿರಾದಾರ್, ಸಿದ್ದಲಿಂಗಸ್ವಾಮಿ, ನಟರಾಜ್, ಬಸವರಾಜಯ್ಯ, ಯೋಗಾನಂದಯ್ಯ, ದಾಕ್ಷಾಯಣಮ್ಮ ಅನ್ನದಾನಪ್ಪ, ದಾಕ್ಷಾಯಣಮ್ಮ ಮಲ್ಲಿಕಾರ್ಜುನಪ್ಪ, ಪುಷ್ಪಾ ವೀರೇಶ್, ರಾಜೇಶ್ವರಿ ಉಮೇಶ್, ಸುನೀತಾ, ಸುಕನ್ಯಾ, ಕವಿತಾ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net