

ದಾವಣಗೆರೆ: ಬಸವಣ್ಣನವರ ತತ್ವ-ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳದೆ ಹೋದರೆ ‘ಸಾಂಸ್ಕೃತಿಕ ನಾಯಕ’ ಪ್ರಕಟಣೆ ಘೋಷಣೆಗೆ ಸೀಮಿತವಾಗಲಿದೆ ಎಂದು ಷಹಪುರದ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ನಗರದ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವೀರಶೈವ ಮಹಾಸಭಾ ಅಧಿವೇಶನದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಗುಡುಗಿದ ನಂತರದಲ್ಲಿ ಸಿದ್ದರಾಮಯ್ಯ ಸರ್ಕಾರ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬುದಾಗಿ ಘೋಷಣೆ ಮಾಡಿತು. ಆದರೆ ಅದು ಭಾವಚಿತ್ರದಂಚಿನ ಪ್ರಕಟಣೆಯಾಗಿ ಉಳಿಯಬಾರದು. ಐಎಎಸ್ ಪರೀಕ್ಷೆಯಂತೆಯೇ ನಮ್ಮ ಬದುಕಿನಲ್ಲಿ ಬಸವಣ್ಣನವರ ಪರೀಕ್ಷೆ ಕಟ್ಟಿಕೊಳ್ಳೋಣ ಎಂದರು.
ಹಿಂದಿನ ಲಿಂಗಾಯತ ಮಠಾಧೀಶರು ಶಿಕ್ಷಣದ ಜತೆಗೆ ವಚನಪ್ರಜ್ಞೆ ನೀಡಿದರು. ಆದರೆ ಅದನ್ನು ನಾವು ಮರೆತಿದ್ದೇವೆ. ಇಂದಿನ ಮಕ್ಕಳಿಗೆ ಒತ್ತಾಯಪೂರ್ವಕವಾಗಿಯಾದರೂ ವಚನಗಳನ್ನು ಕಲಿಸಬೇಕು. ಇಲ್ಲವಾದಲ್ಲಿ ಅವರು ಅನ್ಯ ಧರ್ಮ, ಅನ್ಯ ಸಂಸ್ಕೃತಿಯ ಆಚರಣೆಯತ್ತ ವಾಲಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉತ್ತೇಜನ ನೀಡಿದರೆ ಅವರಲ್ಲಿ ಕಾಣಬಹುದಾದ ಕಾಳಜಿ, ಕಕ್ಕುಲತೆಯೇ ಬಸವತತ್ವದ ಅನುಷ್ಠಾನವಾಗಲಿದೆ ಎಂದ ಅವರು, ಕೋವಿಡ್ ಕಾಲದಲ್ಲಿ ಎಲ್ಲ ದೇಗುಲ, ಮಂದಿರಗಳು ಮುಚ್ಚಿದ್ದವು. ಆದರೆ ಇಷ್ಟಲಿಂಗ ಪೂಜೆಗೆ ವ್ಯಾಪಕತೆ ಸಿಕ್ಕಿತು. ಇಷ್ಟಲಿಂಗ ಧಾರಣೆ ಮಾಡದವರನ್ನು ಲಿಂಗಾಯತರು ಎನ್ನಲು ಸಾಧ್ಯವಿಲ್ಲ ಎಂದರು.
ಇಂದು ರಾಜಕಾರಣಿಗಳಷ್ಟೇ ಕೆಲವು ಮಠಾಧೀಶರೂ ಕೆಟ್ಟು ಹೋಗಿದ್ದಾರೆ. ಇಂದಿನ ಬಹುತೇಕ ಮಠಗಳು ಮೋಜು-ಮಸ್ತಿಯಲ್ಲಿ ಮುಳುಗಿವೆ. ಇಷ್ಟಲಿಂಗ ಪೂಜೆ ಮಾಡಿಕೊಳ್ಳದ, ವಚನಗಳೇ ಗೊತ್ತಿರದ ಮಠಾಧೀಶರೂ ಇದ್ದಾರೆ. ಲಿಂಗಾಯಿತ ಧರ್ಮ ಮಠಾಧೀಶರ ಧರ್ಮವಲ್ಲ, ಇದು ಭಕ್ತರ ಧರ್ಮ. ಇದು ಪ್ರಜ್ಞಾ ಸಮಾಜವಾಗಿದ್ದು ಪ್ರಜ್ಞಾಹೀನ ಸ್ಥಿತಿಗೆ ಹೋಗಬಾರದು ಎಂದೂ ಹೇಳಿದರು.
ವಚನಗಳಲ್ಲಿ ಪರಧನ ತಿರಸ್ಕರಿಸುವ, ಪರಸ್ತ್ರೀಯರನ್ನು ಗೌರವಿಸುವ ಸಾರವಿದೆ. ಆದರೆ ಇಂದಿನ ರಾಜಕಾರಣ ಗಮನಿಸಿದರೆ ಕಣ್ಮುಚ್ಚಿ ಓಡಿ ಹೋಗುವ ದುಸ್ಥಿತಿ ಬಂದಿದೆ. ಧರ್ಮದಲ್ಲೂ ದಗಲ್‌ಬಾಜಿತನ ನಡೆಸಲಾಗುತ್ತಿದೆ ಎಂದ ಅವರು, ಬಸವಣ್ಣ ಅವರನ್ನು ನಾವಿಂದು ಅರ್ಥ ಮಾಡಿಕೊಳ್ಳದಿದ್ದಲ್ಲಿ ನಮ್ಮೊಳಗೆ ಮನುಸ್ಮತಿ ಆವರಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜವಾದಿ ಮಾದರಿಯ ಸರ್ಕಾರವನ್ನು ಆಲೋಚನೆ ಮಾಡಿ, ಅದನ್ನು ಕಾರ್ಯರೂಪಕ್ಕೆ ತಂದರು. ಇಂದಿನ ಸರ್ಕಾರಗಳು ಅದರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಸಮಾನ ಗೌರವ ಕಲ್ಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ವೀರಶೈವ ಮಹಾಸಭಾದಿಂದ ಪ್ರತಿ ವರ್ಷ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಲಾಗುತ್ತಿದ್ದು ಇದಕ್ಕೆ 1 ಕೋಟಿ ರೂ. ವೆಚ್ಚವಾಗುತ್ತಿದೆ. ಆದರೂ ಮಕ್ಕಳ ವ್ಯಾಸಂಗಕ್ಕೆ ಉತ್ತೇಜನ ನೀಡಲು ಆಡಳಿತ ಮಂಡಳಿ ತೀರ್ಮಾನದಂತೆ ಈ ಕಾರ್ಯ ಮುಂದುವರಿಸಿದ್ದೇವೆ ಎಂದು ಹೇಳಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 101ನೇ ರ‌್ಯಾಂಕ್ ವಿಜೇತೆ ಸೌಭಾಗ್ಯಾ ಎಸ್. ಬೀಳಗಿಮಠ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯ ಟಾಪರ್ ಎಚ್.ಜಿ. ಗಾನವಿ ಅವರನ್ನು ಸನ್ಮಾನಿಸಲಾಯಿತು. 2021-22, 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ- ಪಿಯುನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭೆಯ 24ನೇ ಅಧಿವೇಶನಕ್ಕೆ ಸಹಕರಿಸಿದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಎಸ್.ಎಸ್. ಪಾಟೀಲ್, ಮಹಾಸಭಾದ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಪ್ರೊ. ವೈ.ವೃಷಭೇಂದ್ರಪ್ಪ ಇದ್ದರು. ಬೆಂಗಳೂರಿನ ಕಲರವ ಸಾಂಸ್ಕೃತಿಕ ವೇದಿಕೆಯ ಸಿದ್ದರಾಮ ಕೇಸಾಪುರ ಅವರ ತಂಡ ಹಾಗೂ ಕದಳಿ ಮಹಿಳಾ ವೇದಿಕೆ ತಂಡದವರು ವಚನಗೀತೆಗಳನ್ನು ಪ್ರಸ್ತುತಪಡಿಸಿದರು.