

ದಾವಣಗೆರೆ: ಭಾರತಕ್ಕೆ ಮೌಲ್ಯಯುತ ಧಾರ್ಮಿಕ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಅವರ ದೇವಸ್ಥಾನವನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಪಕ್ಕದಲ್ಲೇ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಗಮನ ಹರಿಸಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ವಾಲ್ಮೀಕಿ ಪ್ರತಿಷ್ಠಾನ ಮತ್ತು ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ 4ನೇ ವರ್ಷದ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವದ ಶುಕ್ರವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ಹಾಸ್ಟೆಲ್, ವಿದ್ಯಾರ್ಥಿ ವೇತನ ಸೇರಿ ಹಲವು ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡಲಾಗುವುದು ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಎಸ್ಟಿ ಮೀಸಲಾತಿ ಒಳಗೆ ಬೇರೆ ಸಮಾಜದವರನ್ನು ಸೇರ್ಪಡೆ ಮಾಡುವ ಪ್ರಯತ್ನ ಸಲ್ಲ. ನಮ್ಮ ಸಮಾಜಕ್ಕೆ ಅನ್ಯಾಯವಾದರೆ ಹೋರಾಟ ಅನಿವಾರ್ಯ ಎಂದರು.
ಸಮಾಜದ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ಶೋಷಣೆಯಿಂದ ಹೊರಬರಲು ಇರುವ ಏಕೈಕ ಮಾರ್ಗವಾಗಿದೆ. ಸರ್ಕಾರ ನಮ್ಮದೇ ಇರಬಹುದು. ಮೀಸಲಾತಿ ವಿಚಾರದಲ್ಲಿ ಸಮಾಜಕ್ಕೆ ಅನ್ಯಾಯವಾದರೆ ಹೋರಾಟ ಮಾಡಲು ಹಿಂದೆ ಬೀಳುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ರಾಮಾಯಣದ ಆದರ್ಶವೇ ಜಗತ್ತಿಗೆ ಪ್ರೇರಣೆಯಾಗಿದೆ. ಸಹೋದರರ ಬಾಂಧವ್ಯ, ತಂದೆ-ಮಗನ ಉತ್ತಮ ಸಂಬಂಧವನ್ನು ಮಹಾಕಾವ್ಯದಲ್ಲಿ ಕಟ್ಟಿಕೊಡಲಾಗಿದೆ. ಹಾಗಾಗಿ ರಾಮಾಯಣ ಹಿಂದುಗಳ ಪಾಲಿಗೆ ಮೊದಲ ಸಂವಿಧಾನವಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ ನಾಗಪ್ಪ, ಎಸ್ಪಿ ಮೋರ್ಚಾ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಮಾಜಿ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ತ್ಯಾವಣಿಗೆ ಕೃಷ್ಣ ಮೂರ್ತಿ, ತ್ಯಾವಣಿಗೆ ಗೋವಿಂದ ಸ್ವಾಮಿ, ಸಮಾಜದ ಮುಖಂಡ ಎನ್.ಎಂ.ಆಂಜನೇಯ ಗುರೂಜಿ ಮಾತನಾಡಿದರು.
ಇದೇ ವೇಳೆ ಹಮ್ಮಿಕೊಂಡಿದ್ದ ಯುವ ಜನೋತ್ಸವದಲ್ಲಿ ಜೆಎಚ್.ಪಟೇಲ್ ಬಡಾವಣೆಯ ಪ.ಪಂಗಡಗಳ ಮಹಿಳಾ ವಸತಿ ನಿಲಯದ ಮಕ್ಕಳು ಪ್ರಥಮ, ಮಳಲ್ಕೆರೆಯ ಏಕಲವ್ಯ ತಂಡ ದ್ವಿತೀಯ, ಚನ್ನಗಿರಿ ತಾಲೂಕಿನ ಮಲ್ಲಿಗೇನಹಳ್ಳಿಯ ಸುಭದ್ರ ತಂಡ ತೃತೀಯ, ಕಿತ್ತೂರು ಹಾಗೂ ಹುಚ್ಚವ್ವನಹಳ್ಳಿಯ ತಂಡಗಳು ನಾಲ್ಕನೇ ಬಹುಮಾನ ಪಡೆದವು. ವಿಜೇತರಿಗೆ ತ್ಯಾವಣಿಗೆ ಜ್ಞಾನೇಶ್, ಹೊನ್ನೂರು ವಸಂತ್ ಬಹುಮಾನ ವಿತರಿಸಿದರು.