

ದಾವಣಗೆರೆ: ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು 2026ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲಿದ್ದು ಶೀಘ್ರವೇ ಅನುದಾನ ಒದಗಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗುರುವಾರ ಲೋಕಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ಅನುದಾನ ಮೀಸಲಿರಿಸಿದ್ದು, ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದರು.
ಕೇಂದ್ರ ಸರ್ಕಾರವು ಅಪ್ಪರ್ ಭದ್ರಾಗೆ 5300 ಕೋಟಿ ರೂ.ಗಳ ಸಹಾಯಧನ ಮಂಜೂರು ಮಾಡಿದ್ದು ಸತ್ಯವೇ? ಕರ್ನಾಟಕ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಿದ್ದಾರೆಯೇ? ಹಾಗಿದ್ದಲ್ಲಿ, ಅದರ ವಿವರ ಮತ್ತು ಹಣ ಬಿಡುಗಡೆ ಮಾಡದಿರಲು ಕಾರಣಗಳೇನು? ಭದ್ರಾ ಮೇಲ್ದಂಡೆ ಯೋಜನೆಯು ಪೂರ್ಣಗೊಳ್ಳುವ ನಿರೀಕ್ಷೆ ಸರ್ಕಾರಕ್ಕಿದೆಯೇ? ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ? ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದರು.
ಈ ಯೋಜನೆಯಿಂದ ಬರಪೀಡಿತ ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಜಮೀನು, ನೂರಾರು ಕೆರೆಗಳು ಮತ್ತು ಕುಡಿವ ನೀರಿಗೆ ಅನುಕೂಲವಾಗಲಿದ್ದು ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆಯೂ ಒತ್ತಾಯಿಸಿದರು.
ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಉತ್ತರಿಸಿದರು. ನೀರಾವರಿ ಯೋಜನೆಗಳ ಯೋಜನೆ, ಅನುಷ್ಠಾನ, ಧನಸಹಾಯಕ್ಕೆ ಸಂಬಂಧಪಟ್ಟ ವಿಚಾರಗಳು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿವೆ. ಗುರುತಿಸಲಾದ ನೀರಾವರಿ ಯೋಜನೆಗಳಿಗೆ ಭಾರತ ಸರ್ಕಾರವು ಯೋಜನೆಗಳ ಅಡಿಯಲ್ಲಿ ಭಾಗಶಃ ಆರ್ಥಿಕ ಸಹಾಯ ಒದಗಿಸುತ್ತಿದೆ. ಸಚಿವಾಲಯದ ಅಡಿಯಲ್ಲಿ ಕೇಂದ್ರ ಜಲ ಆಯೋಗವು ಅಂತರ-ರಾಜ್ಯ ಮಧ್ಯಮ ಮತ್ತು ಪ್ರಮುಖ ನೀರಾವರಿ ಯೋಜನೆಗಳ ತಾಂತ್ರಿಕ-ಆರ್ಥಿಕ ಮೌಲ್ಯಮಾಪನ ಮಾಡಬೇಕಾಗಿದೆ.
ಭದ್ರಾ ಯೋಜನೆಯನ್ನು ಭಾರತ ಸರ್ಕಾರದ ಯೋಜನೆಯಡಿ ಸೇರಿಸಲಾಗಿಲ್ಲ. ಆದಾಗ್ಯೂ, ಯೋಜನೆಯ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಸಚಿವಾಲಯದ ಸಂಬಂಧಿತ ಸಮಿತಿಯು ಅಂಗೀಕರಿಸಿದೆ ಮತ್ತು ಯೋಜನೆಯನ್ನು ಸಾರ್ವಜನಿಕ ಹೂಡಿಕೆ ಮಂಡಳಿ ಮೌಲ್ಯಮಾಪನ ಮಾಡಿ, ಕೇಂದ್ರದ ಸಹಾಯಕ್ಕೆ ಶಿಫಾರಸು ಮಾಡಿದೆ. ಯೋಜನೆಗೆ 5,300 ಕೋಟಿ ರೂ.ಗಳನ್ನು 2023-24ರ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ಒದಗಿಸಲಾಗಿತ್ತು ಎಂದರು.
2023 ರಲ್ಲಿ ರಾಜ್ಯ ಸರ್ಕಾರದ ಕೋರಿಕೆಯಂತೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ ಅಡಿಯಲ್ಲಿ ನೆರವು ನೀಡಲು ಜಲಶಕ್ತಿ ಸಚಿವಾಲಯವು ಪ್ರಸ್ತಾವನೆ ತೆಗೆದುಕೊಂಡಿದ್ದು, ಕರ್ನಾಟಕ ಸರ್ಕಾರವು ಒದಗಿಸಿದ ಮಾಹಿತಿಯಂತೆ, ಯೋಜನೆಯನ್ನು ಮಾರ್ಚ್ 2026ರೊಳಗೆ ಪೂರ್ಣಗೊಳಿಸುವ ಗುರಿಯಿದೆ ಎಂದು ಉತ್ತರಿಸಿದರು.