

ಹೊನ್ನಾಳಿ: ಇತ್ತೀಚಿನ ದಿನಗಳಲ್ಲಿ ಸಂಶೋಧನೆಗೆ ಅಗತ್ಯವಾದ ಕೃತಕ ಬುದ್ಧಿಮತ್ತೆಯು ಆಯ್ಕೆ ಮತ್ತು ಸಾಹಿತ್ಯ ಅವಲೋಕನದಲ್ಲಿ ಅತಿ ಹೆಚ್ಚು ನೆರವಾಗುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಶಶಿಧರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಆಡಳಿತಾತ್ಮಕ ಸಮಸ್ಯೆಗಳ ಸಂಖ್ಯೆಯೂ ಹೆಚ್ಚಾಗಿದ್ದು, ಇವುಗಳ ನಿವಾರಣೆಗೆ ಇಂತಹ ಕಾರ್ಯಾಗಾರಗಳು ಅತ್ಯವಶ್ಯಕ. ಯಾರೂ ಪ್ರಾಮಾಣಿಕವಾಗಿ ಶ್ರಮದಿಂದ ಸಂಶೋಧನೆಯಲ್ಲಿ ತೊಡಗುತ್ತಾರೋ ಅಂತಹ ವ್ಯಕ್ತಿಗಳು ಸಮಾಜಕ್ಕೆ ಆಸ್ತಿಯಾಗಬಲ್ಲರು ಮತ್ತು ಇನ್ನೊಬ್ಬರ ಸಮಸ್ಯೆಗಳಿಗೆ ಉತ್ತರವಾಗಬಲ್ಲರು. ಆದ್ದರಿಂದ ಎಲ್ಲ ವಿಷಯಗಳಲ್ಲೂ ಆಳವಾಗಿ ಸಂಶೋಧನೆಗೆ ಇಳಿಯಬೇಕು. ಆಗ ಮಾತ್ರ ನಿಮ್ಮ ಶ್ರಮ ಸಾರ್ಥಕ್ಯ ಪಡೆಯುತ್ತದೆ ಎಂದರು.
ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಎ. ಸೋಮಶೇಖರಪ್ಪ ಮಾತನಾಡಿ, 1990 ಕ್ಕಿಂತ ಪೂರ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿದ್ದ ವಾತಾವರಣಕ್ಕೂ ತದ ನಂತರದಲ್ಲಿ ಆಗಿರುವ ಕ್ರಾಂತಿಕಾರಕ ಬದಲಾವಣೆ, ಅದರಲ್ಲೂ 1986ರಲ್ಲಿ ಪ್ರಧಾನಮಂತ್ರಿ ರಾಜೀವ್ಗಾಂಧಿ ಅವರು ಕಾರ್ಯಗತಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸಿಕೊಟ್ಟಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಧನಂಜಯ ಮಾತನಾಡಿ, ಯಾವುದೇ ಸಂಶೋಧನೆಗೆ ಇಳಿದರೂ ಮೊದಲಿಗೆ ಅದರಲ್ಲಿ ಗೊಂದಲ ಇರಬಾರದು. ನಿಮಗೆ ಅದೊಂದು ಸವಾಲಾಗಿರುತ್ತದೆ. ಆ ಸವಾಲಿನಲ್ಲಿ ನೀವು ಗೆದ್ದು ಬರಬೇಕಾದರೆ ಆಯ್ಕೆಯಾದ ನಂತರ ಗೊಂದಲ ಇಟ್ಟುಕೊಳ್ಳಬಾರದು ಎಂದು ತಿಳಿಸಿದರು.
ನಿಮ್ಮ ಸಂಶೋಧನೆ ಸಮಾಜಕ್ಕೆ ಅನುಗುಣವಾಗಿ ಇರಬೇಕೇ ಹೊರತು ವೈಯಕ್ತಿಕ ಲಾಭಕ್ಕಲ್ಲ ಎನ್ನುವುದು ನೀವು ಮನದಟ್ಟು ಮಾಡಿಕೊಳ್ಳಬೇಕು. ಪ್ರತಿ ಸಂಶೋಧನೆಯಲ್ಲಿ ನಿರ್ದಿಷ್ಟ ಗುರಿ ಹಾಗೂ ಸೈದ್ಧಾಂತಿಕ ನಿಲುವು ಹೊಂದಿರಬೇಕು ಮತ್ತು ನಿಮ್ಮ ಕಲ್ಪನೆಗಳಲ್ಲಿ ನಿಖರ, ನಿರ್ದಿಷ್ಟತೆ ಹಾಗೂ ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ನೀವು ನಡೆಸುವ ಯಾವುದೇ ಸಂಶೋಧನೆಗಳಿರಲಿ ಅವು ವಿಫಲವಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರಿಗೆ ಮನದಟ್ಟು ಮಾಡಿದರು.
ಪ್ರೊ. ಶೋಹಿಬ್ ಅಹ್ಮದ್ ಹಾಗೂ ಗೀತಾ ಮಾತನಾಡಿದರು. ಮುಖ್ಯ ಗ್ರಂಥಪಾಲಕ ಡಾ. ನಾಗರಾಜ್ ನಾಯ್್ಕ ಉಪನ್ಯಾಸಕರಾದ ಹರಾಳು ಮಹಾಬಲೇಶ್ವರ, ಡಾ. ಬೀನಾ, ಕಿರಣ್ ಎಂ ಹಾಗೂ ನಾಲ್ಕು ಜಿಲ್ಲೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.