

ದಾವಣಗೆರೆ: ತುಂಗಾ ಜಲಾಶಯದ ನೀರನ್ನೆತ್ತಿ, ಭದ್ರಾ ಡ್ಯಾಂ ಮೂಲಕ ಭದ್ರಾ ಮೇಲ್ದಂಡೆಗೆ ಹರಿಸಲು ರಾಜ್ಯ ಸರ್ಕಾರ ತುರ್ತು ಗಮನ ಹರಿಸಬೇಕೆಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದಲ್ಲಿ ತುಂಬಿದ ಭದ್ರಾ ಜಲಾಶಯಕ್ಕೆ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಬಾಗಿನ ಸಲ್ಲಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿದರು. ಅಲ್ಲಿಂದ ಇದುವರೆಗೆ ನಾಲೆಗಳನ್ನು ನಿರ್ಮಿಸಲಾಯಿತು. ಇದುವರೆಗೆ ತುಂಗಾ ನೀರೆತ್ತುವ ಕೆಲಸ ಆಗುತ್ತಿಲ್ಲ ಎಂದು ವಿಷಾದಿಸಿದರು.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಮೇಲ್ದಂಡೆ ಯೋಜನೆಗೆ ಈ ಹಿಂದೆ ಒಪ್ಪಿಗೆ ನೀಡಿದಂತೆ ತುಂಗಾ ಜಲಾಶಯದಿಂದ ನಿಗದಿತ ಪ್ರಮಾಣದ ನೀರನ್ನು ಎತ್ತುವ ವಿಚಾರದಲ್ಲಿ ಸರ್ಕಾರ ತಡ ಮಾಡಬಾರದು ಎಂದು ಮನವಿ ಮಾಡಿದರು.
ನೀರು ಹರಿಸುವ ವಿಚಾರದಲ್ಲಿ ಅರಣ್ಯ ಇಲಾಖೆಯಿಂದ ತೊಂದರೆ ಇದ್ದಲ್ಲಿ ರಾಜ್ಯದ 17 ಮಂದಿ ಸಂಸದರು ಅಥವಾ ನನಗೆ ಮಾಹಿತಿ ನೀಡಿದರೆ ಕೇಂದ್ರದಿಂದ ಪರವಾನಗಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದೂ ಭರವಸೆ ನೀಡಿದರು.
ಭದ್ರಾ ಜಲಾಶಯ ತುಂಬಿದ್ದು ನಿನ್ನೆಯಿಂದಲೇ ಹೊಳೆಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಅಚ್ಚುಕಟ್ಟಿನ ಕೊನೆ ಭಾಗದ ರೈತರು ಹೆದರಬೇಕಿಲ್ಲ. ಈ ವರ್ಷದಲ್ಲಿ ನಿಶ್ಚಿತವಾಗಿ ಎರಡು ಬೆಳೆ ಬೆಳೆಯಬಹುದು. ಈ ಬಗ್ಗೆ ಅನುಮಾನ ಬೇಡ ಎಂದೂ ಅಭಯ ನೀಡಿದರು.
ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ 925 ಕೋಟಿ ರೂ. ಮೊತ್ತ ಮಂಜೂರಾಗಿ ಭದ್ರಾ ನಾಲೆಗಳ ನವೀಕರಣ ಕಾಮಗಾರಿ ನಡೆದಿತ್ತು. 14 ವರ್ಷದ ನಂತರ ಕೆಲವೆಡೆ ನಾಲೆಗಳು ಕಿತ್ತು ಹೋಗಿವೆ. ರಾಜ್ಯ ಸರ್ಕಾರ ಹೂಳೆತ್ತಿ ನಾಲೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದೂ ಆಗ್ರಹಿಸಿದರು.
ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ ರೈತರು ಒಗ್ಗಟ್ಟಾಗಿದ್ದರೆ ಏನನ್ನಾದರೂ ಮಾಡಬಹುದು. ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ನರೇಂದ್ರ ಮೋದಿ ಸರ್ಕಾರಕ್ಕೆ ಮತ ನೀಡಿ ಬೆಂಬಲಿಸಿ ಸರ್ಕಾರ ರಚನೆ ಮಾಡಿದ್ದಕ್ಕೆ ಹೆಮ್ಮೆ ಇದೆ. ನಮ್ಮ ಸರ್ಕಾರ ರೈತರ ಕಷ್ಟ ನೀಗಿಸುವ ವಿಶ್ವಾಸವಿದೆ. ಎಲ್ಲ ಸಂಸದರು ಕೂಡ ಅಗತ್ಯ ಕೆಲಸಗಳಿಗೆ ಸ್ಪಂದಿಸಲಿದ್ದಾರೆ ಎಂದು ಹೇಳಿದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ ಭದ್ರಾ ನಾಲೆಗಳಲ್ಲಿ ಹೆಚ್ಚಿನ ಹೂಳು ತುಂಬಿದ್ದು, ಕೆಲವೆಡೆ ನಾಲೆಗಳು ಹಾನಿಗೀಡಾಗಿವೆ. ರಾಜ್ಯ ಸರ್ಕಾರ, ಅವುಗಳ ದುರಸ್ತಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಭದ್ರಾ ನಾಲಾ ಆಧುನೀಕರಣದಿಂದ ಉಪಯೋಗವಾಗಿಲ್ಲ ಎಂದು ಕಾಂಗ್ರೆಸಿಗರು ಸೋಮವಾರ ನಡೆದ ಐಸಿಸಿ ಸಭೆಯಲ್ಲಿ ಹೇಳಿದ್ದಾಎ. ಹಾಗೆ ಟೀಕಿಸುವುದನ್ನು ಕೈಬಿಟ್ಟು ನಾಲೆ ದುರಸ್ತಿಗೆ ಸರ್ಕಾರದಿಂದ ಹಣ ಕೊಡಿಸಲಿ. ಬಿಜೆಪಿಯವರು ನಾಲೆ ನವೀಕರಣ ಮಾಡಿದ್ದರಿಂದಲೇ ಅಚ್ಚುಕಟ್ಟಿನ ಕೊನೆ ಭಾಗದ ರೈತರು ಭದ್ರಾ ನೀರು ಕಾಣುವಂತಾಗಿದೆ ಎಂದು ಹೇಳಿದರು.
ಅಚ್ಚುಕಟ್ಟು ರೈತರು ಹೆಚ್ಚು ನೀರು ಬಳಸದೆ ವೈಜ್ಞಾನಿಕವಾಗಿ ಬೀಜ ಚೆಲ್ಲು ಭತ್ತ ಪ್ರಯೋಗದ ಮೂಲಕ ನೀರು ಉಳಿಸುವ ಪ್ರಯತ್ನಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಮುಖಂಡರಾದ ವೀರೇಶ್ ಹನಗವಾಡಿ, ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್. ಜಗದೀಶ್, ತುಮ್‌ಕೋಸ್ ಶಿವಕುಮಾರ್, ಶಾಂತರಾಜ್ ಪಾಟೀಲ್, ಬಾತಿ ವೀರೇಶ್, ಜಿ.ಎಸ್. ಅನಿತ್‌ಕುಮಾರ್, ರಾಜನಹಳ್ಳಿ ಶಿವಕುಮಾರ್, ಎಂ.ಆರ್. ಮಹೇಶ್, ಎಚ್.ಎನ್. ಶಿವಕುಮಾರ್, ಕೆ. ಪ್ರಸನ್ನಕುಮಾರ್, ಎಸ್.ಟಿ.ವೀರೇಶ್, ಎ.ವೈ. ಪ್ರಕಾಶ್, ಸಂಗನಗೌಡ, ದೇವೇಂದ್ರಪ್ಪ, ಕೊಂಡಜ್ಜಿ ಜಯಪ್ರಕಾಶ್, ಎ.ಬಿ. ಹನುಮಂತಪ್ಪ, ಮಂಜುಳಾ ಟಿ.ವಿ ರಾಜು, ಗಾಯತ್ರಿಬಾಯಿ, ಯಶೋದಾ ಯಗ್ಗಪ್ಪ, ಅಣಬೇರು ಜೀವನಮೂರ್ತಿ, ಮುರುಗೇಶ್ ಆರಾಧ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಇದ್ದರು.
---