

ದಾವಣಗೆರೆ: ವಿವಿಧ ಇಲಾಖೆಗಳಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಸಾಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ, ಪ.ಜಾತಿ ಉಪಯೋಜನೆ, ಗಿರಿಜನ ಉಪಯೋಜನೆಯಡಿ ಅನುಷ್ಠಾನದ ಅಭಿವೃದ್ಧ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾರ್ಚ್ ಮೊದಲ ವಾರದಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಬಳಸಿ ವರದಿ ನೀಡಬೇಕು ಎಂದರು.
ಯೋಜನೆಯಡಿ ಕೈಗೊಳ್ಳಲಾದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧ್ದಿ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಮುಗಿಸಿ ಮುಂದಿನ ಸಭೆಗೆ ವರದಿ ನೀಡಬೇಕು. ಅರಣ್ಯ ಇಲಾಖೆಯವರು ವರದಿ ನೀಡದಿದ್ದಲ್ಲಿ ಸರ್ಕಾರಕ್ಕೆ ಬರೆಯಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಎಸ್ಸಿಪಿ ಯೋಜನೆಯಡಿ 261.65 ಕೋಟಿ ರೂ. ಹಂಚಿಕೆಯಾಗಿದ್ದು, ಬಿಡುಗಡೆಯಾದ 144.33 ಕೋಟಿ ರೂ. ಪೈಕಿ 126.92 ಕೋಟಿ ರೂ. ವ್ಯಯಿಸಿ ಶೇ.87.94 ರಷ್ಟು ಪ್ರಗತಿ ಸಾಧಿಸಲಾಗಿದೆ. ಟಿಎಸ್ಪಿ ಯೋಜನೆಯಡಿ 116.45 ಕೋಟಿ ರೂ. ಹಂಚಿಕೆಯಾಗಿದ್ದು 72.86 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 62.06 ಕೋಟಿ ರೂ. ವೆಚ್ಚ ಮಡಿ ಶೇ.85.17 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ನಗರಾಭಿವೃದ್ಧ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್. ಡಿಡಿಪಿಐ ಜಿ. ಕೊಟ್ರೇಶ್, ಡಿಎಚ್‌ಒ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
----------