ನಾ. ಡಿಸೋಜ ನಾಡಿನ ಪರಿಪೂರ್ಣ ಸಾಹಿತಿ

1000611332.jpg
Published on

ದಾವಣಗೆರೆ: ಸೃಜನಶೀಲ ಸಾಹಿತ್ಯ ಕೃಷಿ ಮೂಲಕ ಸಾಹಿತ್ಯಾಸಕ್ತರ ಮನ ಗೆದ್ದಿರುವ ದಿ.ನಾ.ಡಿಸೋಜ ಅವರು ನಾಡು ಕಂಡ ಪರಿಪೂರ್ಣ ಸಾಹಿತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಬಣ್ಣಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಹಮ್ಮಿಕೊಂಡಿದ್ದ, ನಾ.ಡಿಸೋಜ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ವಿ.ಕೃ. ಗೋಕಾಕ್ ಅಲ್ಲದೆ  ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮೊದಲಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದರಿಂದಲೇ ಅವರೊಬ್ಬ ಪರಿಪೂರ್ಣ ಸಾಹಿತಿಯಾಗಲು ಕಾರಣವಾಯಿತು ಎಂದರು.  
ಅವರ ಸಾಹಿತ್ಯ ಬಹು ಆಯಾಮದಲ್ಲಿ ರಚನೆ ಆಗುತ್ತಿತ್ತು. ಅವರ ಕಾದಂಬರಿಗಳು ಪ್ರಮುಖವಾಗಿ ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗ ಮೊದಲಾದ ವಿಷಯ ವಸ್ತುಗಳನ್ನು ಆಧರಿಸಿದ್ದವು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಹೋದಾಗ ಹೆಚ್ಚು ಸಮಯವನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಳೆಯುತ್ತಿದ್ದರು ಎಂದು ಹೇಳಿದರು.
ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಮಾತನಾಡಿ ಶ್ರೇಷ್ಠ ಸಾಹಿತಿಯಾಗಿದ್ದರೂ ಸರಳ ವ್ಯಕ್ತಿತ್ವ ನಾ. ಡಿಸೋಜ ಅವರದಾಗಿತ್ತು. ವ್ಯಕ್ತಿತ್ವಕ್ಕೆ ಗೌರವ ಕೊಡುವ ಸಹೃದಯಿಯಾಗಿದ್ದರು. ಮುಳುಗಡೆಯಾದ ಪ್ರದೇಶಗಳ ಜನರ ನೋವು ಮತ್ತು ಸಂಕಟದ ಬಗ್ಗೆ ಬರವಣಿಗೆಯ ಮೂಲಕ ಸಮಾಜ ಮತ್ತು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಮುಟ್ಟಿಸುವ ಸಂವೇದನಾಶೀಲ ಸಾಹಿತಿ ಅವರಾಗಿದ್ದರು ಎಂದು ಸ್ಮರಿಸಿದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕ ಮಾತಾಡಿ ನಾ.ಡಿಸೋಜ ಅವರು ಮುಳುಗಡೆ, ಕಾಡಿನ ಬೆಂಕಿ, ದ್ವೀಪ ಸೇರಿದಂತೆ 40 ಕಾದಂಬರಿ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ 12 ಕೃತಿ, 9 ಕಥಾ ಸಂಕಲನ ಬರೆದಿದ್ದಾರೆ. 2 ಸಮಗ್ರ ಕಥೆಗಳ ಸಂಪುಟ ಪ್ರಕಟಗೊಂಡಿವೆ ಎಂದರು.
ಇವರ ಕಾದಂಬರಿ ಕಾಡಿನ ಬೆಂಕಿ ಹಾಗೂ ದ್ವೀಪ ಚಲನಚಿತ್ರಗಳಾಗಿ ರಜತಕಮಲ ಮತ್ತು ಸ್ವರ್ಣಕಮಲ ಪ್ರಶಸ್ತಿಗಳನ್ನು ಪಡೆದಿವೆ. ಬಳುವಳಿ ಕಾದಂಬರಿಯು ಕೊಂಕಣಿ ಭಾಷೆಯಲ್ಲಿ ಚಲನಚಿತ್ರವಾಗಿದೆ. ಅವರ ಅನೇಕ ಕೃತಿಗಳು ಪಠ್ಯಪುಸ್ತಕವಾಗಿವೆ, ನಾಟಕಗಳಾಗಿವೆ ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿ ಜಿ.ಕೆ.ಕುಲಕರ್ಣಿ, ಕಾದಂಬರಿಕಾರ್ತಿ ಡಿ.ಸಿ.ಚಂಪಾ ಅವರು ನಾ.ಡಿಸೋಜ ಜತೆಗಿದ್ದ ಒಡನಾಟ ಹಂಚಿಕೊಂಡರು.
ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಡ್ಯಾನಿಯಲ್ ಚಿಂದವಾಳ, ನಿವೃತ್ತ ಡಿಡಿಪಿಯು ರುದ್ರಮುನಿ, ವೆಂಕಟರಮಣ ಬೆಳೆಗೆರೆ, ಕೆ.ಪಿ.ಮರಿಯಾಚಾರ್, ಎಸ್.ಎಂ.ಮಲ್ಲಮ್ಮ, ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ರುದ್ರಾಕ್ಷಿ ಬಾಯಿ, ರುದ್ರಮುನಿ ಹಿರೇಮಠ, ವೀಣಾ ಮಹಾಂತೇಶ್, ಸತ್ಯಭಾಮಾ ಮಂಜುನಾಥ್, ಗಿರಿಜಾ ಸಿದ್ದಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net