

ದಾವಣಗೆರೆ: ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ದಾವಣಗೆರೆ ಜಿಲ್ಲೆಗೆ ಆಹ್ವಾನ ಬಂದಿರುವುದು ಇಲ್ಲಿನ ಸಾಂಸ್ಕೃತಿಕ ಬೇರುಗಳಿಂದಾಗಿಯೇ ಹೊರತಾಗಿ ರಾಜಕೀಯ ಕಾರಣಗಳಿಂದಲ್ಲ ಎಂದು ಹಿರಿಯ ನಟ, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಸ್ಪಷ್ಟಪಡಿಸಿದರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಪ್ರತಿಮಾ ಸಭಾದಿಂದ ಡಾ.ಎಂ.ಜಿ.ಈಶ್ವರಪ್ಪ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂರನೇ ವಿಶ್ವ ಕನ್ನಡ ಸಮ್ಮೇಳನ ರಾಜಕೀಯ ಪ್ರಭಾವಿಗಳಿರುವ, ಹಣವಂತರ ಜಿಲ್ಲೆಗೆ ಹೋಗಬಹುದಿತ್ತು. ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಚಟುವಟಿಕೆಗಳಿಂದಾಗಿ ದಾವಣಗೆರೆ ಜಿಲ್ಲೆಗೆ ಇದು ಒಲಿದಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಜರುಗಿದ ವೃತ್ತಿ ರಂಗಭೂಮಿಯ ಎರಡನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳು ಜೀವಂತಿಕೆಯ ವೃತ್ತಿ ನಾಟಕ ಕಂಪನಿಗಳಿಗೆ ಅನುದಾನ ಘೋಷಿಸಿದ್ದರು. ಇದು ಸಾಧ್ಯವಾಗಿದ್ದು ದಾವಣಗೆರೆಯಿಂದ. ಡಾ.ಎಂ.ಜಿ.ಈಶ್ವರಪ್ಪ ಈ ಸಮ್ಮೇಳನದಲ್ಲಿ ಮುಂದಾಳತ್ವ ವಹಿಸಿದ್ದರು. ಒಬ್ಬ ಕ್ರಿಯಾತ್ಮಕ ನಾಯಕರಾಗಿ ಕೆಲಸ ಮಾಡಬಹುದು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರು.
ನಾನು ನಾಟಕ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಈಶ್ವರಪ್ಪ ಅವರು ಕಲಾವಿದರ ಪರವಾಗಿ ಎಲ್ಲವನ್ನು ಕೇಳಿದರೇ ಹೊರತಾಗಿ ವೈಯಕ್ತಿಕವಾಗಿ ಏನನ್ನೂ ಬಯಸಲಿಲ್ಲ. ಅವರ ಯಾವುದೇ ಶಿಫಾರಸು ಕೂಡ ಜಾತಿ, ಕಳಂಕ ರಹಿತ ಹಾಗೂ ಮೆರಿಟ್ ಆಧಾರಿತವಾಗಿರುತ್ತಿದ್ದವು. ಹೀಗಾಗಿ ಅಕಾಡೆಮಿ ಅವರ ಮಾತಿಗೆ ಆದ್ಯತೆ ನೀಡುತ್ತಿತ್ತು.
ಕರ್ನಾಟಕದ ಯಾವುದೇ ಮೂಲೆಯಲ್ಲಿ ಪ್ರಮುಖ ಸಾಂಸ್ಕೃತಿಕ ಚಟುವಟಿಕೆ ನಡೆದರೂ ಎಂ.ಜಿ.ಈಶ್ವರಪ್ಪ ಇರುತ್ತಿದ್ದರು. ತಮ್ಮ ಸಂಪರ್ಕಕ್ಕೆ ಬಂದವರಿಗೆ ಪ್ರತಿಮಾ ಸಭಾ ಮೂಲಕ ಕೆಲಸ ಹಂಚುತ್ತಿದ್ದರು. ಹೀಗಾಗಿ ದಾವಣಗೆರೆ ಕೀರ್ತಿ ಹೆಚ್ಚಿತು. ಪ್ರತಿಂಆ ಸಭಾ ಮೂಲಕ ನಾಡಿನ ಖ್ಯಾತ ಬರಹಗಾರರು, ಚಿಂತಕರು ಹೊರಬಂದು. ದಾವಣಗೆರೆ ಸಾಂಸ್ಕೃತಿಕ ಸಿರಿತನಕ್ಕೆ ಈಶ್ವರಪ್ಪ ಕೊಡುಗೆ ನೀಡಿದರು. ಈ ವಿಚಾರದಲ್ಲಿ ಭಾರತಕ್ಕೇ ಸುದ್ದಿ ಕೊಟ್ಟರು ಎಂದರು.
ಕಾಟನ್‌ಮಿಲ್ ಖ್ಯಾತಿಯ ದಾವಣಗೆರೆ ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಕೊಡುಗೆ ನೀಡಿತ್ತು. ನಂತರದಲ್ಲಿ ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿತು. ರಂಗಾಯಣಕ್ಕೆ ಕಲಾವಿದರ ಆಯ್ಕೆ ನಡೆದಿದ್ದು ದಾವಣಗೆರೆಯಲ್ಲಿಯೇ. ಕಲಾವಿದರಿಗೆ ಉತ್ತೇಜನ ತುಂಬುತ್ತಿದ್ದ ಈಶ್ವರಪ್ಪನವರು ರಂಗ ನಿರ್ದೇಶಕ ಸುರೇಂದ್ರ ಬೆಳವಣಿಗೆಗೆ ಕಾರಣರಾಗಿದ್ದವರು. ಒಬ್ಬ ಪ್ರಾಧ್ಯಾಪಕರಾಗಿದ್ದರೂ ರೆಪೆರ್ಟರಿ ಕುರಿತಂತೆ ಅಧ್ಯಯನ ನಡೆಸಿದ್ದರು ಎಂದು ಸ್ಮರಿಸಿದರು.
ಕಾದಂಬರಿಕಾರ ಕುಂ. ವೀರಭದ್ರಪ್ಪ ಮಾತನಾಡಿ ಎಲ್ಲಿಂದಲೋ ಬಂದ ಈಶ್ವರಪ್ಪನವರು ದಾವಣಗೆರೆ ನೆಲವನ್ನು ಸಸ್ಯಶ್ಯಾಮಲ ಆಗಿಸಿದರು. ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದರು. ನುಡಿನಮನ ಕಾರ್ಯಕ್ರಮಕ್ಕೆ ಬಂದ ಜನಸಂದಣಿ ಗಮನಿಸಿದರೆ ಅವರೊಬ್ಬ ಅಸಾಮಾನ್ಯ ಎಂಬುದು ತಿಳಿಯಲಿದೆ. ಇಂತಹ ಸದಭಿರುಚಿಯ ವ್ಯಕ್ತಿಯನ್ನು ಕಳೆದುಕೊಂಡ ದಾವಣಗೆರೆ ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆ. ಎಂದು ಹೇಳಿದರು.
ಈಶ್ವರಪ್ಪನವರು ನನ್ನ ಪ್ರಥಮ ಕಾದಂಬರಿ ಪ್ರಕಟವಾದಾಗ ನನ್ನಲ್ಲಿ ಬರವಣಿಗೆಯ ಭರವಸೆ ಮೂಡಿಸಿದ್ದರು. ಅವರ ಆಸೆಯಂತೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಉತ್ತಮವಾಗಿ ನಡೆಸಲು ಶೀನಿವಾಸ ಕಪ್ಪಣ್ಣ ಹೆಚ್ಚಿನ ಪ್ರಯತ್ನ ನಡೆಸಬೇಕು. ಈಶ್ವರಪ್ಪ ಹೆಸರು ಉಳಿಯುವಂತೆ ಒಂದು ರಸ್ತೆಗೆ ನಾಮಕರಣ ಮಾಡಬೇಕು. ಒಂದು ಅಭಿನಂದನಾ ಗ್ರಂಥ ಹೊರತರಬೇಕು ಎಂದು ಆಶಿಸಿದರು.
ಚಿತ್ರದುರ್ಗದ ಸಂಶೋಧಕ ಬಿ. ರಾಜಶೇಖರಪ್ಪ ಮಾತನಾಡಿ ಈಶ್ವರಪ್ಪ ಅವರನ್ನು ಕುರಿತ ಸಂಸ್ಮರಣಾ ಗ್ರಂಥ ಪ್ರಕಟಿಸಬೇಕು. ದಾವಣಗೆರೆ ಸಾಂಸ್ಕೃತಿಕ ಕ್ಷೇತ್ರದ ದಾಖಲೆ ಉಳಿಯುವಂತೆ ಸಂಪುಟ ರಚಿಸಬೇಕು ಎಂದು ಆಶಿಸಿದರು.
ಮೈಸೂರು ರಂಗಾಯಣದ ಶಶಿಕಲಾ ಮಾತನಾಡಿ ಈಶ್ವರಪ್ಪ ಅವರು ನನ್ನಂತಹ ಅನೇಕರಲ್ಲಿ ಸಾಂಸ್ಕೃತಿಕ ಪ್ರಜ್ಞೆ, ರಂಗಭೂಮಿ ಮತ್ತು ಸಾಹಿತ್ಯದ ಅರಿವನ್ನು ಮೂಡಿಸಿದರು ಎಂದು ಹೇಳಿದರು.
ಸಾಹಿತಿ ಬಸವರಾಜ ನೆಲ್ಲಿಸರ ಮಾತನಾಡಿ ಈಶ್ವರಪ್ಪ ಅವರದು ಹಸುವಿನಂತಹ ಮನಸ್ಸು, ಪ್ರೀತಿಯೇ ಅವರ ಬಂಡವಾಳ. ಸಿಡಿಮಿಡಿಗೊಳ್ಳದ ಮೌನ ಜೀವಿ ಎಂದು ಸ್ಮರಿಸಿದರು.
ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತ ಬಿ.ಎನ್. ಮಲ್ಲೇಶ್, ಈಶ್ವರಪ್ಪನವರ ಫೋನ್ ಕರೆ ಬಂದರೆ ಸ್ವೀಕರಿಸುವಷ್ಟು ಪ್ರಭಾವಳಿ, ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಅವರದಾಗಿತ್ತು. ಈಶ್ವರಪ್ಪನರಂತೆಯೇ ಈ ಊರು ಇದೆ. ಅವರ ಹೆಸರಿನಲ್ಲಿ ನಾಟಕೋತ್ಸವ, ಪ್ರಶಸ್ತಿ ಸ್ಥಾಪಿಸುವ ಬಗ್ಗೆ ಯೋಚನೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಮಾ ಸಭಾದ ಸಂಸ್ಥಾಪಕ ನಿರ್ದೇಶಕ ಪ್ರೊ.ಜಿ.ಎನ್. ಸತ್ಯಮೂರ್ತಿ, ಸ್ಥಾಪಕ ಅಧ್ಯಕ್ಷ ಪ್ರೊ. ಎಸ್. ಹಾಲಪ್ಪ, ಬೆಳಗೆರೆಯ ಶ್ರೀಪಾದ್ ಪೂಜಾರ್, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಇತರರು ಮಾತನಾಡಿದರು. ರಂಗಕರ್ಮಿ ಬಾ.ಮ.ಬಸವರಾಜಯ್ಯ ಸ್ವಾಗತಿಸಿದರು. ನಾಗರಾಜ ಸಿರಿಗೆರೆ ಕಾರ್ಯಕ್ರಮ ನಿರ್ವಹಿಸಿದರು. ಅನಿತಾ ವಂದಿಸಿದರು. ಗಾನಲಹರಿ ಸಂಗೀತ ವಿದ್ಯಾಲಯ ತಂಡದವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.