ಪಾರದರ್ಶಕ ನೇಮಕಾತಿಗಾಗಿ ಹಕ್ಕೊತ್ತಾಯ

1001243795.jpg
Published on

ದಾವಣಗೆರೆ : ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ ಪಾರದರ್ಶಕತೆಗೆ ಕ್ರಮ ಕೈಗೊಳ್ಳುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದರು. ಅಲ್ಲಿನ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.

ಕಾಂಗ್ರೆಸ್‌ಸರ್ಕಾರ 2 ವರ್ಷ 4 ತಿಂಗಳಾದರೂ ಯಾವುದೇ ನೇಮಕಾತಿ ನಡೆಸದೆ ಯುವಕರಿಗೆ ಉದ್ಯೋಗದ ಗ್ಯಾರಂಟಿ ನೀಡಲಿಲ್ಲ. ಪ್ರಸಕ್ತ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಉಳಿದಿದ್ದರೂ ಕುಂಟು ನೆಪ ಹೇಳಿ ನೇಮಕಾತಿ ಮುಂದೂಡುವ ಪ್ರಯತ್ನ ನಡೆದಿವೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಹಲವಾರು ವರ್ಷಗಳಿಂದ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. 4-5 ವರ್ಷಗಳಿಂದ ನೇಮಕಾತಿ ನಡೆಯದಿರುವುದರಿಂದ ಬಹುತೇಕ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗ ಸಿಗದೆ ಯುವಜನರು ಆತ್ಮಹತ್ಯೆಯತ್ತ ಮೊರೆ ಹೋಗುತ್ತಿದ್ದಾರೆ ಎಂದರು.

ಇನ್ನೊಂದೆಡೆ ಕೆಪಿಎಸ್ಸಿಯ ಅಧ್ಯಕ್ಷರು, ಸದಸ್ಯರ ಒಳಜಗಳ ನಡೆಯುತ್ತಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಹುದ್ದೆಗಳು ಖಾಲಿ ಉಳಿದಿವೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21.381 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್, ಕಂದಾಯ, ಒಳಾಡಳಿತ ಸೇರಿ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಭರ್ತಿಯಾಗಿಲ್ಲ.

ನೇಮಕಾತಿಗಾಗಿ ಕಾಯುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಗ್ರಂಥಾಲಯಗಳಲ್ಲಿ ಓದಲು ಉದ್ಯೋಗಾಕಾಂಕ್ಷಿಗಳು ಖರ್ಚು ಮಾಡಿಕೊಂಡಿದ್ದಾರೆ. ಪಾಲಕರು ಹಗಲಿರುಳು ಕೂಲಿ ಮಾಡುತ್ತ ಸಾಲ ಮಾಡಿ ಮಕ್ಕಳಿಗೆ ಕೋಚಿಂಗ್ ಕೊಡಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಮಾನವೀಯವಾಗಿ ವರ್ತಿಸಲಿ ಎಂದು ಆಗ್ರಹಿಸಿದರು.

ಕೂಡಲೆ ಎಲ್ಲಾ ಇಲಾಖಾವಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಬೇಕು. 4-5 ವರ್ಷದಿಂದ ಯಾವುದೇ ನೇಮಕಾತಿ ನಡೆಯದ್ದರಿಂದ ಪೊಲೀಸ್ ಪೇದೆ ಸೆರಿ ಎಲ್ಲ ನೇಮಕಾತಿಗೆ ಅರ್ಹ ವಯೀಮಿತಿಯಲ್ಲಿ ಕನಿಷ್ಠ 5 ವರ್ಷಗಳ ಸಡಿಲಿಕೆ ಮಾಡಬೇಕು.

ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ವ್ಯವಸ್ಥೆ ಕೈಬಿಟ್ಟು ಕಾಯಂ ಮಾಡಬೇಕು. ಕೆಇಎ ಹೊರಡಿಸಿದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ಅರ್ಜಿಗೆ ಹಾಕಿರುವ ದುಬಾರಿ ಶುಲ್ಕ ಕೈಬಿಡಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಜಿಲ್ಲಾ ಮುಖಂಡರಾದ ವಿಶ್ವನಾಥ್, ಪರಶುರಾಂ, ಅನಿಲ್‌ಕುಮಾರ್, ಎಸ್. ಶ್ರೀನಿವಾಸ್, ರಾಘವೇಂದ್ರ, ಸುಹೇಲ್, ರಾಕೇಶ್, ಮಲ್ಲಾನಾಯ್ಕ, ಪುನೀತ್, ಧರಣೀಶ್‌ಕುಮಾರ್, ನಾಗರಾಜ್, ದೇವರಾಜ್ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net