

ದಾವಣಗೆರೆ: ಪರಿಸರ ಜಾಗೃತಿ ಸರ್ಕಾರದ ಜವಾಬ್ದಾರಿ ಎಂದು ಪರಿಗಣಿಸದೆ ಸಮಾಜದ ಪ್ರತಿಯೊಬ್ಬರೂ ಪ್ರಕೃತಿ ರಕ್ಷಣೆಗಾಗಿ ಪಣ ತೊಡಬೇಕೆಂದು ಬಿಐಇಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಬಿ.ಟಿ. ಅಚ್ಯುತ್ ತಿಳಿಸಿದರು.
ನಗರದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿವರ್ತನಾ ವೇದಿಕೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸರಿ ಇಲ್ಲದ್ದನ್ನು ಬದಲಾವಣೆ ಮಾಡುವುದೇ ಪರಿವರ್ತನೆ. ಈ ನಿಟ್ಟಿನಲ್ಲಿ ಪರಿಸರ ಶುದ್ಧವಾಗಿಸುವ ದೃಷ್ಟಿಯಿಂದ ಪರಿವರ್ತನಾ ವೇದಿಕೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಈ ಹಿಂದೆ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಕಸ-ರಸ ಅಭಿಯಾನದ ಮೂಲಕ ಜಾಗೃತಿ ಮೂಡಿಸಿದ್ದರು. ದಾವಣಗೆರೆ ನಗರವು ಪರಿವರ್ತನಾ ವೇದಿಕೆಯ ಚಟುವಟಿಕೆಗಳ ಮೂಲಕ ಇನ್ನಷ್ಟು ಶುದ್ಧವಾಗಲಿ ಎಂದು ಆಶಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಕಸ ಉತ್ಪತ್ತಿ ಮಾಡುವವನೇ ಕಸ ವಿಲೇವಾರಿ ಮಾಡುವ ಜವಾಬ್ದಾರಿ ಹೊರಬೇಕು. ಹಸಿ ಕಸ ಮತ್ತು ಒಣ ಕಸವನ್ನು ವ್ಯವಸ್ಥಿತವಾಗಿ ಮನೆಯಲ್ಲಿಯೇ ವಿಂಗಡಣೆ ಮಾಡಿದರೆ ಊರಿನ ಕಸ, ಬೆಟ್ಟದಂತೆ ಬೆಳೆಯುವುದಿಲ್ಲ ಎಂದು ಹೇಳಿದರು.
ಕಳೆದ ಬೇಸಿಗೆಯಲ್ಲಿ ಎಲ್ಲರೂ ನೀರಿನ ಬವಣೆ ಎದುರಿಸಿದ್ದೇವೆ. ಇಂತಹ ಸಂಕಷ್ಟ ಸಮಾಜಕ್ಕೆ ಬರಬಾರದೆಂದರೆ ಗಿಡಗಳನ್ನು ನೆಡುವ ಕಾರ್ಯದ ಜತೆಯಲ್ಲೇ ಮಗಳನ್ನು ಬೆಳೆಸುವ ಮತ್ತು ರಕ್ಷಿಸುವ ಕಾಯಕದಲ್ಲಿ ತೊಡಗಬೇಕು ಎಂದು ಹೇಳಿದರು.
ಈಗಾಗಲೇ ವಿಜ್ಞಾನಿಗಳು ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕುರಿತು ಮುನ್ನೆಚ್ಚರಿಕೆ ನೀಡಿದ್ದು, ದೇಶದಲ್ಲಿ ಅಧಿಕ ತಾಪಮಾನದಿಂದ ಸಾವು ಸಂಭವಿಸಿದ ನಿದರ್ಶನಗಳಿವೆ. ಹಾಗಾಗಿ ಪರಿಸರ ಕಲುಷಿತಗೊಳಿಸಬಾರದು ಎಂಬ ಅರಿವು ಎಲ್ಲರಲ್ಲೂ ಬೇಕು ಎಂದು ತಿಳಿಸಿದರು.
ಆವರಗೊಳ್ಳದ ಕಸ ವಿಲೇವಾರಿ ಘಟಕಕ್ಕೆ ತಿಂಗಳ ಹಿಂದೆ ಬೆಂಕಿ ಬಿದ್ದಿತ್ತು, ಮಳೆಗಾಲ ಬಂದರೂ ಬೆಂಕಿ ನಂದಿಲ್ಲ. ಇಂತಹ ದುರ್ಘಟನೆಯಿಂದ ಅಂತರ್ಜಲ ಹಾಗೂ ವಾತಾವರಣದಲ್ಲಿ ವಿಷಾನಿಲ ಬೆರೆತು ಜೀವಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.
ವೈದ್ಯ ಡಾ. ಸುರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡಾವಣೆಯಲ್ಲಿ ವೇದಿಕೆಯಿಂದ ಪ್ರಾರಂಭವಾದ ಪರಿಸರ ಜಾಗೃತಿಯ
ಪಯಣ ಪರಿವರ್ತನಾ ವೇದಿಕೆಯಾದ ಬದಲಾದ ಬಗ್ಗೆ ವಿವರಿಸಿದರು.
ಮುಂದಿನ ಪೀಳಿಗೆಗೆ ಸ್ವಾಸ್ಥ್ಯ ಪ್ರಕೃತಿ ನೀಡುವ ಉದ್ದೇಶದಿಂದ ಮಳೆ ನೀರು ಕೊಯ್ಲು, ಕಸ ವಿಲೇವಾರಿ ಮತ್ತು ಗಿಡ ನೆಡುವ ಮೂಲಕ ಪ್ರಕೃತಿಯ ಸೇವೆ ಮಾಡುವ ದೃಷ್ಟಿಕೋನ ಪರಿವರ್ತನಾ ವೇದಿಕೆಗಿದೆ ಎಂದು ತಿಳಿಸಿದರು.
ಸಿವಿಲ್ ಇಂಜಿನಿಯರ್ ಶ್ರೀನಿವಾಸ ಮೂರ್ತಿ ಅವರು ಪ್ರಾತ್ಯಕ್ಷಿಕೆ ಮೂಲಕ ‘ಮಳೆ ನೀರು ಕೊಯ್ಲು’ ವಿಷಯ ಕುರಿತು ವಿವರಣೆ ನೀಡಿದರು ಹಿರಿಯ ವೈದ್ಯೆ ಡಾ. ಶಾಂತಾ ಭಟ್, ಬಾಪೂಜಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ವೇದಿಕೆಯ ಕಾರ್ಯದರ್ಶಿ ಮಮತಾ, ತರಳಬಾಳು ಕೆವಿಕೆ ಸಂಸ್ಥೆಯ ಪಶು ವಿಷಯ ತಜ್ಞ ಡಾ. ಜಯದೇವಪ್ಪ ಇತರರಿದ್ದರು.