

ದಾವಣಗೆರೆ: ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಅಥವಾ ಅಧಿಕಾರ ವಿಕೇಂದ್ರೀಕರಣ ಮಾಡುವುದು ಉತ್ತಮ ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಹೇಳಿದರು.
ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಶನಿವಾರ, ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜವಾಬ್ದಾರಿ ಕಡಿಮೆಯಾಗುತ್ತಿವೆ. ಹೀಗಾಗಿ ಬ್ಯಾಂಕುಗಳ ಖಾಸಗೀಕರಣ ಅಥವಾ ಅಧಿಕಾರ ವಿಕೇಂದ್ರೀಕರಣವಾದರೆ ಅಲ್ಲಿನ ಆಡಳಿತ ಮತ್ತು ಹಣಕಾಸು ಸ್ಥಿತಿ ಹತೋಟಿಯಲ್ಲಿ ಇರಲಿದೆ. ಸಾರ್ವಜನಿಕರ ವ್ಯವಹಾರಗಳು ಕೂಡ ಸುಗಮವಾಗಲಿವೆ. ಸಿಬ್ಬಂದಿಯಲ್ಲೂ ಜನಸೇವೆಯ ಮನಸ್ಥಿತಿ ಬೆಳೆಯಲಿದೆ ಎಂದರು.
ಕೆಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಣ್ಣ ಹಣಕಾಸಿನ ವ್ಯವಹಾರಕ್ಕೂ ಇಡೀ ದಿನ ಕಾಯಬೇಕಿದೆ. ಗ್ರಾಹಕರ ಸಮಸ್ಯೆಗಳಿಗೆ ಸಿಬ್ಬಂದಿ ಸ್ಪಂದಿಸದ ದೂರುಗಳಿವೆ. ಸುವುದಿಲ್ಲ. ಖಾಸಗಿ ಬ್ಯಾಂಕುಗಳಲ್ಲಿ ಸೌಹಾರ್ದಯುತ ವಾತಾವರಣವಿದೆ ಎಂದು ಹೇಳಿದರು.
ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸೂಕ್ತ ತರಬೇತಿಯ ಅಗತ್ಯವಿದೆ. ಇದರಿಂದ ದೇಶದ ಆರ್ಥಿಕತೆ ಸಮೃದ್ಧಿಯಾಗಿ ಬೆಳೆಯಲಿದೆ. ಸಹಕಾರಿ ಕ್ಷೇತ್ರದಿಂದಲೇ ದೇಶದ ಪ್ರಗತಿ ಎಂಬುದನ್ನು ಹಿಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು ಮನಗಂಡಿದ್ದರು. ಅದರ ಪರಿಣಾಮವಾಗಿ ಇಂದು ಕೇಂದ್ರ ಸರ್ಕಾರ ಗ್ರಾಮ ಮಟ್ಟದಿಂದಲೂ ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಆರ್.ರಾಮರೆಡ್ಡಿ ಮಾತನಾಡಿ, ಗ್ರಾಹಕರ ಜತೆಗಿನ ಉತ್ತಮ ವ್ಯವಹರಿಸುವಿಕೆ ಕೂಡ ಬ್ಯಾಂಕು ಮತ್ತು ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಷ್ಟೇ ತರಬೇತಿ ಪಡೆದರೂ ಸಾಲದು. ಬ್ಯಾಂಕ್ ಮತ್ತು ಸಹಕಾರಿ ಕ್ಷೇತ್ರದಲ್ಲಿ ನಿತ್ಯ ಆಗುತ್ತಿರುವ ಹೊಸ ಬದಲಾವಣೆಗಳನ್ನು ತಿಳಿದುಕೊಳ್ಳಲು ಸಿಬ್ಬಂದಿ ಸದಾ ಉತ್ಸುಕರಾಗಿರಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಇಂದು ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಅವುಗಳ ತಡೆಗೆ ಸಹಕರಿಸುವುದು ಬ್ಯಾಂಕ್ ಮತ್ತು ಸಹಕಾರ ಸಂಘಗಳ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಜಿ.ಶ್ರೀನಿವಾಸ ಮೂರ್ತಿ ಮಾತನಾಡಿ, ಕನಿಷ್ಠ 500 ಕೋಟಿ ರೂ ಠೇವಣಿ ಹೊಂದಿರದ ಬ್ಯಾಂಕುಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಇದರತ್ತ ಬ್ಯಾಂಕ್‌ಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಜೀವನ ಕೌಶಲ ಮತ್ತು ವೃತ್ತಿ ನಿರ್ವಹಣೆ ಪ್ರೇರಣೆ ಕುರಿತು ಧಾರವಾಡದ ಸಂಪನ್ಮೂಲ ವ್ಯಕ್ತಿ ಮಹೇಶ್, ಸೈಬರ್ ಸುರಕ್ಷತೆ ಕುರಿತು ಕೆ.ಎಸ್.ಮಹಾದೇವಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಹಕಾರ ಯೂನಿಯನ್ ಉಪಾಧ್ಯಕ್ಷ ಬೇತೂರು ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಕುಮಾರ್, ಡಿ.ಎಂ.ಮುರುಗೇಂದ್ರಯ್ಯ ಇತರರಿದ್ದರು. ಕರ್ನಾಟಕ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಸಹಕಾರ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
----