

ಧನಂಜಯ ಎಸ್. ಹಕಾರಿ ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬಾರಿ ಗಣೇಶನ ಮೂರ್ತಿಗಳಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. ಳೆದ 2 ವರ್ಷ ಕರೊನಾ ಕಾರಣದಿಂದ ಹಬ್ಬದ ವಿಜೃಂಭಣೆಗೆ ತೊಡಕಾಗಿತ್ತು. ಆದರೆ ಈ ವರ್ಷ ಕರೊನಾ ಆತಂಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು ಅದ್ದೂರಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಗಣೇಶ ತಯಾರಕರು, ಈ ಬಾರಿ ಸಾವಿರಾರು ಮೂರ್ತಿಗಳನ್ನು ತಯಾರಿಸಿದ್ದಾರೆ. ಕೆಲವು ವಿಶೇಷ ರೂಪದಲ್ಲಿ ಗಮನ ಸೆಳೆಯುತ್ತಿವೆ.
ಪರಿಸರ ಸ್ನೇಹಿ ಟ್ರಾೃಕ್ಟರ್ ಗಣೇಶ: ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಸಾರ್ವಜನಿಕರು ಒಲವು ತೋರುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಮಣ್ಣಿನ ಗಣಪನದೇ ಸಾಮ್ರಾಜ್ಯ. ದಾವಣಗೆರೆ ಮಾರುಕಟ್ಟೆಯಲ್ಲಿ ಟ್ರಾೃಕ್ಟರ್ ಮೇಲೆ ಕುಳಿತ ಗಣೇಶ, ಟ್ರಾೃಕ್ಟರ್ ಚಲಾಯಿಸುತ್ತಿರುವ ಮೂಷಿಕ, ಹಳೇ ರೈಲು ಇಂಜಿನ್‌ನಲ್ಲಿ ಕುಳಿತ ಲಂಬೋದರ, ಕಮಲದಲ್ಲಿ ಕುಳಿತ ಗಣಪ, ಇಲಿ ಮೇಲಿನ ಗಣೇಶ, ಈಶ್ವರನ ರೂಪದಲ್ಲಿರುವ ಮೂರ್ತಿಗಳು ಕಂಗೊಳಿಸುತ್ತಿವೆ.
ತರಳಬಾಳು ಮಂಟಪ: ಹಿಂದು ಮಹಾಸಭಾ ಸಂಘ ಗಣೇಶೋತ್ಸವವನ್ನು ಪ್ರತಿ ಬಾರಿ ವಿಭಿನ್ನವಾಗಿ ಆಚರಿಸುತ್ತದೆ. ಕಳೆದ ಬಾರಿ ಧರ್ಮಸ್ಥಳದ ಮಾದರಿಯಲ್ಲಿ ಮಂಟಪ ರಚಿಸಿತ್ತು. ಈ ಬಾರಿ ತರಳಬಾಳು ಮಠದ ಮಾದರಿಯ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಒಳ ಭಾಗದಲ್ಲಿ ಬಸವಣ್ಣ, ವಿವೇಕಾನಂದ ಸೇರಿ ಮಹನೀಯರ ತತ್ವಗಳು ರಾರಾಜಿಸಲಿವೆ.
ಮಣ್ಣಿನ ಮೂರ್ತಿಗೆ ಪಿಓಪಿ ಕಂಟಕ: ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆದರೂ ಹೊರ ರಾಜ್ಯಗಳಿಂದ ಕಳ್ಳ ಮಾರ್ಗದಲ್ಲಿ ಪಿಒಪಿ ಗಣೇಶ ಮೂರ್ತಿಗಳು ಬಂದಿವೆ. ಬಿಹಾರ ಮೂಲದ ಕೆಲವರು ಇವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಾರ್ವಜನಿಕರು ಹಗುರ ಹಾಗೂ ಬಣ್ಣದಿಂದ ಕಂಗೊಳಿಸುವ ಗಣೇಶ ಮೂರ್ತಿಗಳತ್ತ ಆಕರ್ಷಿತರಾಗುತ್ತಾರೆ ಎನ್ನುತ್ತಾರೆ ಗಣೇಶ ತಯಾರಕ ಪ್ರತಾಪ್.
ಸಾಮಾನ್ಯವಾಗಿ ಗಣೇಶನ ಮೂರ್ತಿಗಳನ್ನು ಸಾರ್ವಜನಿಕರು ಟ್ರಾೃಕ್ಟರ್‌ನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅದೇ ಮಾದರಿಯಲ್ಲಿ ಗಣೇಶನನ್ನು ತಯಾರಿಸಿದರೆ ಹೇಗಿರುತ್ತೆ ಎಂದು ಟ್ರಾೃಕ್ಟರ್, ರೈಲು ಬಂಡಿ ಮೇಲೆ ಕುಳಿತ ಗಣೇಶನನ್ನು ತಯಾರಿಸಲಾಯಿತು. ಈ ವರ್ಷ ಉತ್ತಮ ಬೇಡಿಕೆಯಿದ್ದು, ಸಾವಿರಾರು ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಲಾಗಿದೆ. ನಾಗೇಂದ್ರ ರಾವ್ ಜಾಧವ್ ಗಣೇಶ ತಯಾರಕ