ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

1001234171.jpg
Published on

ದಾವಣಗೆರೆ: ಐ ಲವ್ ಮೊಹಮ್ಮದ್ ಅಭಿಯಾನ ನೆಪದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದಿರುವ ಹಿಂದುಗಳ ಮೇಲಿನ ದಾಳಿ ಘಟನೆಗಳ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿಯು ಗುರುವಾರ, ಜಿಲ್ಲಾಡಳಿತದ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಿದೆ.

ಕೆಲವು ದಿನಗಳಿಂದ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೆಲವು ಮುಸ್ಲಿಂ ಯುವಕರು ಐ ಲವ್ ಮೊಹಮ್ಮದ್ ಅಭಿಯಾನ ಪ್ರಾರಂಭಿಸಿ ಹಿಂದುಗಳ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ. ದಾವಣಗೆರೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲೂ ಸೆ.24ರಂದು ಹಿಂದುಗಳ ಮನೆ ಮೇಲೆ ಬಲವಂತವಾಗಿ ಈ ಫಲಕಗಳನ್ನು ಹಾಕಿ ಗಲಭೆ ಸೃಷಿಸುವ ಷಡ್ಯಂತ್ರ ನಡೆದಿತ್ತು ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನವರಾತ್ರಿ ವೇಳೆ ಗುಜರಾತ್‌ನ ಗಾಂಧಿನಗರದಲ್ಲಿ ರಾತ್ರಿ ಮುಸ್ಲಿಮರ ಗುಂಪು ಹಿಂದುಗಳ ಮೇಲೆ ದಾಳಿ ಮಾಡಿತು. ಈ ದಾಳಿಯಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು ಮತ್ತು ಸಾರ್ವಜನಿಕ ಆಸ್ತಿಗೆ ದೊಡ್ಡ ಪ್ರಮಾಣದ ಹಾನಿ ಮಾಡಲಾಯಿತು. ಇದರ ಬಗ್ಗೆ ಆಳ ತನಿಖೆ ನಡೆಸಿ, ಮೂಲ ಕಾರಣಗಳನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೆಕು ಎಂದು ಆಗ್ರಹಿಸಿದರು.

ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸುವ ಘಟನೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ದೋಷಿಗಳಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು. ಈ ಬಗ್ಗೆ ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ನೀತಿ ರೂಪಿಸಿ ಕಾನೂನು ಜಾರಿ ಮಾಡಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಹಿಂದು ರಾಷ್ಟ್ರ ಸಮನ್ವಯ ಸಮಿತಿಯ ಜಿಲ್ಲಾ ಸಮನ್ವಯಕಾರ ರಾಘವೇಂದ್ರ ಅಂಗಡಿ, ಹಿಂದು ಜನಜಾಗೃತಿ ಸಮಿತಿಯ ಮುಖಂಡರಾದ ಆರ್. ಸೋಮಶೇಖರ್, ಜಿ.ಬಿ.ಹನುಮಂತರೆಡ್ಡಿ, ಕೆ.ಟಿ.ಸುರೇಶ್‌ಕುಮಾರ್, ಬಿ.ರಾಮಪ್ಪ, ಜಿ.ಟಿ.ಬಸವರಾಜ್, ಎಂ. ರಾಮಾಂಜನೇಯಲು, ರವಿಶಂಕರ್ ತಿಮ್ಲಾಪುರ, ಎಂ.ಸತೀಶ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net