ಸ್ತ್ರೀಯರ ಗೌರವಕ್ಕಿರಲಿ ಮನೆಗೊಂದು ಶೌಚಗೃಹ

1000510144.jpg
Published on

ದಾವಣಗೆರೆ: ಹೆಣ್ಣುಮಕ್ಕಳ ಗೌರವ ಕಾಪಾಡುವ ದಿಸೆಯಲ್ಲಾದರೂ ಮನೆಗೊಂದು ಶೌಚಗೃಹ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನದ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಶೌಚಗೃಹ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದಲ್ಲಿ ಆರೋಗ್ಯಕ್ಕಾಗಿ ಮಾಡಿದಷ್ಟು ವೆಚ್ಚವನ್ನು ಬೇರಾವುದಕ್ಕೂ ಖರ್ಚು ಮಾಡಲಾಗಿಲ್ಲ. ಶೌಚಗೃಹವಿಲ್ಲದ ಮನೆಯಲ್ಲಿ ಶುಚಿತ್ವ ಕಾಣಲಾಗದು. ನೈರ್ಮಲ್ಯ ಇದ್ದಲ್ಲಿ ಕಾಯಿಲೆಗೆ ಅವಕಾಶವಿಲ್ಲ. ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಗೃಹ ಬಳಕೆಗೆ ಪ್ರೇರೇಪಿಸಬೇಕು ಎಂದರು.
ನಮ್ಮ ದೇಹದಲ್ಲಿ ಶೇ.55 ರಷ್ಟು ಭಾಗ ನೀರು ಇರಬೇಕು. ಇಲ್ಲವಾದರೆ ಮನುಷ್ಯ ನಿಶ್ಯಕ್ತಿಗೆ ಒಳಗಾಗುತ್ತಾನೆ. ನಿಧಾನವಾಗಿ ರಕ್ತದೊತ್ತಡದಿಂದ ನಾಡಿಮಿಡಿತ ಕಡಿಮೆಯಾಗಲಿದೆ. ಇದಕ್ಕೆ ಮೂಲ ಕಾರಣವೇ ಅನೈರ್ಮಲ್ಯತೆ ಎಂದು ಹೇಳಿದರು.
ಶೌಚಗೃಹವನ್ನೂ ಶುಚಿಯಾಗಿ ಇರಿಸಬೇಕು. ಸಿಂಧೂ ನಾಗರಿಕತೆಯಿಂದ ಹಿಡಿದು ಆಧುನಿಕ ಶೌಚಗೃಹಗಳವರೆಗೆ ಅಮೆರಿಕಾದಲ್ಲಿ ವಸ್ತುಸಂಗ್ರಹಾಲಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಳಸದ ಶೌಚಗೃಹಗಳನ್ನು ದುರಸ್ತಿಪಡಿಸಿ ವಿನಿಯೋಗಿಸಿ ಎಂದು ತಿಳಿಸಿದರು.
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಜಿಲ್ಲೆಯಲ್ಲಿ 2,52,000 ನಳ ಸಂಪರ್ಕವಿದ್ದು, ಒಟ್ಟು 2,47,000 ಶೌಚಗೃಹಗಳಿವೆ,. ಶೇ.98 ರಷ್ಟು ಮನೆಗಳಲ್ಲಿ ಶೌಚಗೃಹವಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಗೃಹಕ್ಕೆ ಒತ್ತು ನೀಡಿ, ಬಯಲು ಶೌಚಮುಕ್ತ ಮಾಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಅತಿ ಸ್ವಚ್ಛ ಐದು 5 ಶೌಚಗೃಹಗಳನ್ನು ಗುರುತಿಸಿ ಡಿ. 10 ರ ನಂತರ ಪ್ರಶಸ್ತಿ ನೀಡಲಾಗುವುದು. ಜಿಲ್ಲೆಯಲ್ಲಿ ನಿರುಪಯುಕ್ತ ಸಮುದಾಯ ಶೌಚಗಹಳನ್ನು ಗುರುತಿಸಿ, ಯೋಗ್ಯ ಸ್ಥಿತಿಗೆ ಪರಿವರ್ತಿಸಲಾಗುವುದು. ಅಂದದ ಶೌಚಗೃಹ ಆನಂದ ಶೌಚಗೃಹ ಆಗಿ ಪರುಇವರ್ತಿಸಬೇಕು ಎಂದು ಹೇಳಿದರು.
ಗ್ರಾಮೀಣ ಸ್ವಚ್ಛತಾಗಾರರು, ಸ್ವಸಹಾಯ ಸಂಘದವರನ್ನು ಗುರುತಿಸಿ ಗೌರವಿಸಲಾಯಿತು. ವೈಯಕ್ತಿಕ ಶೌಚಗೃಹಗಳಿಗೆ  ಮಂಜೂರಾತಿ ಪತ್ರ ಹಾಗೂ ಸಂಜೀವಿನಿ ಒಕ್ಕೂಟದ ಮಹಿಳೆಯರು, ಸಂಚಾಲಕರಿಗೆ ಪರವಾನಗಿ ನೀಡಲಾಯಿತು.
ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕಿ ರೇಷ್ಮಾ  ಕೌಸರ್, ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕ ಮಹಾಂತೇಶ್ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net