

ದಾವಣಗೆರೆ: ಸಂಸತ್ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಮತಗಳ್ಳತನ ನಡೆಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಈ ಸಂಬಂಧ ದಾವಣಗೆರೆಯಲ್ಲಿ ಅ. 5ರಂದು ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದು, ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಭಾಗವಹಿಸುವರು.
ಅಂದು ಬೆಳಗ್ಗೆ 10 ಗಂಟೆಗೆ ಜಯದೇವ ವೃತ್ತ ಹಾಗೂ ಬೆಳಗ್ಗೆ 11 ಗಂಟೆಗೆ ಅಖ್ತರ್ ರಜ್ಹಾ ವೃತ್ತದಲ್ಲಿ ಮಯೂರ್ ಅವರು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವರು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್. ಬಿ.ಮಂಜಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲೆಯ ಹಾಲಿ, ಮಾಜಿ ಶಾಸಕರು ಭಾಗವಹಿಸುವರು. ಉಳಿದೆಲ್ಲ ಜನಪ್ರತಿನಿಧಿಗಳು, ಕೆಪಿಸಿಸಿ ಸದಸ್ಯರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ದಾವಣಗೆರೆ ನಗರದಲ್ಲಿ ಶಾಂತಿ ಕದಡಲು ಬಿಜೆಪಿ ಯತ್ನಿಸುತ್ತಿದೆ. ಹಿಂದು ಮುಖಂಡ ಸತೀಶ್ ಪೂಜಾರಿ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಶಾಸಕ ಬಿ. ಪಿ.ಹರೀಶ್ ತಮ್ಮ ಮಗನನ್ನು ಅಖಾಡಕ್ಕೆ ಬಿಡಲಿ. ಕೇವಲ ಹಿಂದುಳಿದವರ ಮಕ್ಕಳನ್ನು ಗಲಾಟೆಗೆ ತಳ್ಳುವುದು ಸರಿಯಲ್ಲ. ಹರೀಶ್ ಅವರು ತಮ್ಮ ವರಸೆ ಮುಂದುವರಿಸಿದರೆ ನಾವೇ ತಕ್ಕ ಉತ್ತರ ನೀಡಲಿದ್ದೇವೆ. ಗಲಾಟೆ ಬಿದ್ದು ಹರಿಹರ ಕ್ಷೇತ್ರಾಭಿವೃದ್ಧಿ ಕಡೆ ಗಮನ ನೀಡಲಿ ಎಂದರು.
ಕಾರ್ಲ್ ಮಾಕ್ಸ್ ನಗರದಲ್ಲಿ ಆದ ಘಟನೆ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅದನ್ನು ನಾವು ವಿರೋಧಿಸುತ್ತೇವೆ. ಕಾರ್ಲ್‌ಮಾರ್ಕ್ಸ್ ನಗರಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದೇವೆ. ಮುಂದಿನ ದಿನದಲ್ಲಿ ಸಚಿವರು ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಜಿ. ಶಿವಕುಮಾರ್, ಎ. ನಾಗರಾಜ್, ಅಯೂಬ್ ಪೈಲ್ವಾನ್, ಅನಿತಾಬಾಯಿ ಮಾಲತೇಶ್, ಮಂಜುಳಮ್ಮ, ಮಂಗಳಮ್ಮ ಇದ್ದರು.
---