

ದಾವಣಗೆರೆ: ಚಿತ್ರನಟರ ತಂಬಾಕು ಜಾಹೀರಾತುಗಳಿಗೆ ಯುವಜನರು ಮರುಳಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ದೊಡ್ಡಬಾತಿಯ ತಪೋವನ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕುರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಾದ ನಟರು ಕೆಲವು ಜಾಹೀರಾತುಗಳ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರೇರೇಪಿತರಾಗಬಾರದು. ಸಾರ್ವಜನಿಕ ತಂಬಾಕು ಸೇವನೆ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಪ್ರತಿ ವರ್ಷ ತಂಬಾಕು ಉತ್ಪನ್ನಗಳ ಸೇವನೆಯಿಂದ 8 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಪುರುಷರಲ್ಲದೆ ಮಹಿಳೆಯರು ಕೂಡ ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರವು ತಂಬಾಕು ಬಳಕೆ, ಸೇವನೆ ನಿಯಂತ್ರಿಸಲು ಕೋಟ್ಪಾದಡಿ ಹಲವು ಕಾನೂನುಗಳನ್ನು ರೂಪಿಸಿದೆ. ಪ್ರತಿಯೊಬ್ಬರೂ ತಂಬಾಕು ನಿಯಂತ್ರಣ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಿ, ಉತ್ತಮ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ, ಯುವಜನರು ತಂಬಾಕು, ಗುಟ್ಖಾ ಮೊದಲಾದ ದುಶ್ಚಟಗಳ ಸಹವಾಸದಿಂದ ದೂರವಿದ್ದು, ಓದಿಗೆ ಆದ್ಯತೆ ನೀಡಬೇಕು. ಪಾಲಕರ ಆಕಾಂಕ್ಷೆ, ಗುರಿ ತಲುಪಬೇಕು ಎಂದರು.
ಮಾನವ ಜೀವನ ಅಮೂಲ್ಯವಾದುದು. ಆದ್ದರಿಂದ ಸಮಯದ ಸದ್ಬಳಕೆಯೊಂದಿಗೆ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಉತ್ತಮ ಜೀವನಶೈಲಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವೈದ್ಯ ಡಾ.ಶಶಿಕುಮಾರ್ ವಿ. ಮೆಹರ್ವಾಡೆ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ತಂಬಾಕು ನಿಯಂತ್ರಣ ಕುರಿತು ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶಿತವಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತಾ ಹೊಸಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಷಣ್ಮುಖಪ್ಪ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಚಾರ್ಯೆ ಡಾ.ಸುಮನಾ ಭಟ್ ಇತರರಿದ್ದರು.
---