

ದಾವಣಗೆರೆ: ಇಂದಿನ ಸಂಶೋಧನಾ ಪ್ರಬಂಧಗಳ ರಚನೆಗೆ ಉತ್ತಮ ಮಾರ್ಗದರ್ಶಕರ ಕೊರತೆ ಕಾಡುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ, ‘ಬೇರು-ಚಿಗುರು‘ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಕನ್ನಡ ಸಾಹಿತ್ಯ-ಸಂಶೋಧನೆ ವಿಚಾರ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ಸಂಶೋಧನಾ ವಿಷಯದ ಬಗ್ಗೆ ಆಳ ಜ್ಞಾನವಿಲ್ಲದ ಮಾರ್ಗದರ್ಶಕರು ಅನೇಕರಿದ್ದಾರೆ. ಹೀಗಾಗಿ ಸಹಿ ಹಾಕಿಕೊಡುವ ಗೈಡ್‌ಗಳಿದ್ದರೆ ಸಾಕು ಎಂಬ ವಾತಾವರಣ ಬಂದಿದೆ ಎಂದು ವಿಷಾದಿಸಿದರು.
ನಮ್ಮಲ್ಲಿಂದು ಎಡ, ಬಲ ಹಾಗೂ ನಡುಪಂಥೀಯ ವಿಚಾರಧಾರೆಗಳಿವೆ. ಅವುಗಳಿಗೆ ನಿರ್ದಿಷ್ಟತೆಗಳಿಲ್ಲ. ಈ ಎಲ್ಲ ಪಂಥಗಳಲ್ಲಿ ಅವರವರ ಮನೋಧರ್ಮಕ್ಕೆ ಅನುಗುಣವಾದ ಆಲೋಚನಾ ಕ್ರಮಗಳನ್ನು ಸಮುದಾಯದಲ್ಲಿ ಬಿತ್ತುವ ಕೆಲಸವಾಗುತ್ತಿದೆ. ಎಲ್ಲದರಲ್ಲೂ ರಾಜಕೀಯ ಸ್ಪರ್ಶವಿದೆ. ಹೀಗಾಗಿ ಯಾವ ವಿಚಾರಧಾರೆ ಅನುಸರಿಸಬೇಕೆಂಬ ಜಿಜ್ಞಾಸೆ ಜನಸಮೂಹದಲ್ಲಿದೆ ಎಂದರು.
ಸಮೂಹ ಮಾಧ್ಯಮಗಳು ನಮಗರಿವಿಲ್ಲದಂತೆ ಒಂದು ಬಗೆಯ ಸ್ಥಾಪಿತವಾದ ಆಲೋಚನಾ ಕ್ರಮಗಳನ್ನು ನಮ್ಮಲ್ಲಿ ಬಿತ್ತುತ್ತಿವೆ. ಇದಕ್ಕೆ ಪರ್ಯಾಯವಾದ ಚಿಂತನೆಗಳು ನಡೆಯುತ್ತಿವೆ. ಇದರ ಹಿಂದೆ ಇರಬಹುದಾದ ಪ್ರಗತಿಪರತೆ ಬಗ್ಗೆ ನಾವು ಆಲೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಇಂದು ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳೂ ಸೇರಿ ಎಲ್ಲ ವರ್ಗದ ಜನರು ಓದಿನಿಂದ ದೂರ ಉಳಿದಿದ್ದಾರೆ. ಟಿವಿ, ಮೊಬೈಲ್ ಮುಂದೆ ಕುಳಿತರೆ ಅವುಗಳೇ ಎಲ್ಲ ವಿಷಯ ಹೇಳುತ್ತವೆ. ನಮಗೆ ಯೋಚಿಸುವ ಅವಕಾಶಗಳೇ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಅಕ್ಷರ ಮಾಧ್ಯಮ ಓದುಗನಿಗೆ ನೀಡುವಷ್ಟು ಕಲ್ಪನಾ ಶಕ್ತಿಯನ್ನು ಸಿನಿಮಾ, ಧಾರಾವಾಹಿಗಳು ನೀಡುವುದಿಲ್ಲ. ಇದಕ್ಕೆ ಯಾವ ಶ್ರಮವೂ ಬೇಡವಾಗಿದೆ ಎಂದರು.
ಲೇಖಕ, ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಅಧ್ಯಾಪಕ ಮತ್ತು ಪತ್ರಿಕಾ ವೃತ್ತಿಗೆ ಬರುವವರಿಗೆ ಶುದ್ಧ ಕನ್ನಡದ ಜ್ಞಾನ ಇರಬೇಕು. ಕಲಿಸುವ ಬೇರು ಗಟ್ಟಿಯಾಗಿಲ್ಲದಿದ್ದರೆ ಚಿಗುರು ಸರಿಯಾಗಿ ಬರುವುದಿಲ್ಲ. ಇಂದು ಬೇರಿನ ಸಮಸ್ಯೆ ಇದೆ. ಬೇರು ಸಧೃಡವಾಗಿರದ ಹೊರತು ಒಳ್ಳೆಯ ಚಿಗುರನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಡಿ.ಅಂಜಿನಪ್ಪ ಪ್ರಾಸ್ತಾವಿಕ ಮಾತನಾಡಿದರು. ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಪ್ರಾಚಾರ್ಯ ಡಾ.ಎಂ.ಆರ್.ಲೋಕೇಶ್, ಎಎಂಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಕೆ.ಅಂಜಿನಪ್ಪ, ಡಾ.ವಿಜಯಕುಮಾರ್ ಭಾಗವಹಿಸಿದ್ದರು. ಬಿ.ಪಿ.ರಾಘವೇಂದ್ರ ಸ್ವಾಗತಿಸಿದರು. ಡಾ.ಆರ್.ಬಿ.ಕವಿತಾ ನಿರೂಪಿಸಿದರು. ಬಿ.ಎಚ್.ಸಚಿನ್ ವಂದಿಸಿದರು.
---