

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಪರ್ಯಾಯವಾಗಿ 3ನೇ ವೇದಿಕೆಯ ಅಗತ್ಯವಿದೆ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ್ ಹೇಳಿದರು.
ಸ್ವಾಭಿಮಾನಿ ಬಳಗ ರಾಜ್ಯದಾದ್ಯಂತ ಸಂಚಲನ ಮೂಡಿಸುವ ಆಶಾಭಾವ ಇದೆ. ಶೀಘ್ರವೇ ಬೀದರ್‌ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆಯೂ ಪ್ರವಾಸ ಮಾಡಿದ್ದೇನೆ. ರಾಜಕಾರಣದಲ್ಲಿ ಅಹಿಂದ ವರ್ಗ ಜಾಗೃತಿ ಆಗುತ್ತಿರುವುದನ್ನು ಗಮನಿಸಿದ್ದೇನೆ. ರಾಜ್ಯದಲ್ಲಿ ರೈತರು ಸೇರಿದಂತೆ ಸ್ವಾಭಿಮಾನಿ ಜನರ ಪರ ಸ್ವಾಭಿಮಾನಿ ಬಳಗ ಇರುತ್ತದೆ. ಅವರ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಬಳಗ ಅವರ ಪರ ದನಿ ಎತ್ತಲಿದೆ ಎಂದರು.
ಕೇವಲ ಅಹಿಂದ ವರ್ಗವನ್ನು ಕೇಂದ್ರೀಕರಿಸಿಲ್ಲ. 3 ವರ್ಷ ಯಾವುದೇ ಪಕ್ಷದಿಂದ ಆಹ್ವಾನ ಬಂದರೂ ಹೋಗುವುದಿಲ್ಲ. ಯಾವುದೇ ಹೊಸ ಪಕ್ಷ ಕಟ್ಟುವ ನಿರ್ಧಾರವೂ ಸದ್ಯಕ್ಕಿಲ್ಲ. ಮುಂಬರುವ ಎಲ್ಲ ಗ್ರಾಪಂ, ತಾಪಂ, ಜಿಪಂ ಇತರೆ ಚುನಾವಣೆಗಳಲ್ಲಿ ಬಳಗ ಸ್ಪರ್ಧಿಸಲಿದೆ ಎಂದು ಹೇಳಿದರು.
ಪ್ರಬಂಧ ಸ್ಪರ್ಧೆ: ಯುವಕರಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಓದಿನ ಹವ್ಯಾಸ, ಸಾಹಿತ್ಯದ ಅಭಿರುಚಿ ಬೆಳೆಸಲು ಸ್ವಾಭಿಮಾನಿ ಬಳಗದಿಂದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ಧಿಗೆ ಮಾರಕ ಎಂಬ ವಿಷಯದಡಿ ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಾಜಕಾರಣ ಇಂದು ಕುಟುಂಬಗಳ ಹಿಡಿತದಲ್ಲಿದ್ದು, ಇದರ ಬಗ್ಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 8ನೇ ತರಗತಿಯಿಂದ ದ್ವಿತೀಯ ಪಿಯು, ಪದವಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ 25ರಿಂದ 35 ವರ್ಷ ವಯೋಮಿತಿ ವಿಭಾಗದ ಸಾರ್ವಜನಿಕರು, ಗೃಹಿಣಿಯರು ಸ್ಪರ್ಧೆಯಲ್ಲಿ ಭಾಗಿಯಾಗಬಹುದು.
ಕೈಬರಹದ ಪ್ರಬಂಧವನ್ನು ಗುರುತಿನ ಚೀಟಿ ಅಥವಾ ಆಧಾರ್ ಪ್ರತಿಯೊಂದಿಗೆ, ಇನ್‌ಸೈಟ್ಸ್ ಐಎಎಸ್, ಜಾಧವ್ ಕಾಂಪ್ಲೆಕ್ಸ್, ರಿಂಗ್ ರಸ್ತೆ, ನಿಜಲಿಂಗಪ್ಪ ಬಡಾವಣೆ, ಎಜು ಏಷಿಯಾ ಶಾಲೆ ಎದುರು, ದಾವಣಗೆರೆ 577004 ಇಲ್ಲಿಗೆ ಡಿ. 20ರೊಳಗೆ ಸಲ್ಲಿಸಬೇಕು. ಮಾಹಿತಿಗೆ 9606388288, 6363682537 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಡಿ. ಶೆಟ್ಟರ್, ವಿರೂಪಾಕ್ಷಪ್ಪ ಪಂಡಿತ್ ಇದ್ದರು