ಸರ್ಕಾರಿ ಆಚರಣೆಯಾಗಲಿ ವೃತ್ತಿ ರಂಗಭೂಮಿ ದಿನ

dvG-rangayana-nov-15_20241117014609865.jpg
Published on

ದಾವಣಗೆರೆ: ರಾಜ್ಯ ಸರ್ಕಾರ, ನವೆಂಬರ್ 14ರಂದು ವೃತ್ತಿ ರಂಗಭೂಮಿ ದಿನವನ್ನು ಸರ್ಕಾರಿ ಆಚರಣೆಗೆ ಕ್ರಮ ವಹಿಸಬೇಕೆಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಆಗ್ರಹಿಸಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ವೃತ್ತಿ ರಂಗಭೂಮಿ ದಿನ ಮತ್ತು ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡಿನಲ್ಲಿ 1871ರ ನ.14ರಂದು ಚೊಚ್ಚಲ ನಾಟಕ ಮೇಳ ಉದಯವಾಗಿತ್ತು. ಈ ವಿಶೇಷ ದಿನದ ಸ್ಮರಣಾರ್ಥ, ವೃತ್ತಿ ರಂಗಭೂಮಿ ದಿನದ ಆಚರಣೆಗೆ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮರಾಠಿ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದನ್ನು ಕಂಡು ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಸಕ್ಕರಿ ಬಾಳಾಚಾರ್ಯರು (ಶಾಂತ ಕವಿ) ಕೆಲಸ ಮಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಸೇವೆ ಅರ್ಪಿಸಿದ ಶಾಂತ ಕವಿ, ಕನ್ನಡಿಗರ ಅಭಿಮಾನ ಶೂನ್ಯತೆಯನ್ನು ಬಡಿದೆಬ್ಬಿಸುವ ಕಾರ್ಯ ಮಾಡಿದ್ದರು. ಕನ್ನಡದಲ್ಲಿ 70ಕ್ಕೂ ಅಧಿಕ ನಾಟಕಗಳನ್ನು ಸಿದ್ಧಪಡಿಸಿ, ಪ್ರದರ್ಶಿಸುವ ಜತೆಗೆ ನಾಟಕ ಕಂಪನಿ ಕಟ್ಟುವಲ್ಲಿ ಮೊದಲಿಗರಾಗಿದ್ದಾರೆ ಎಂದರು.
ವಚನ ಚಳವಳಿ ಕಾಲದಲ್ಲೇ ವೃತ್ತಿ ರಂಗಭೂಮಿ ಜನ್ಮ ತಾಳಿದೆ. ವಚನ ಚಳವಳಿಯಲ್ಲಿ ಪರಿಚಯಕ್ಕೆ ಬರುವ ಬಹುರೂಪಿ ಚೌಡಯ್ಯನವರೇ ಪ್ರಪಂಚದ ಮೊಟ್ಟ ಮೊದಲ ವೃತ್ತಿ ರಂಗಭೂಮಿಯ ರಂಗಕರ್ಮಿಯಾಗಿದ್ದಾರೆ ಎಂದು ಹೇಳಿದರು.
ದಾವಣಗೆರೆ ಜನರು ರಂಗಭೂಮಿಯ  ನಿಕಟವರ್ತಿಗಳಾಗಿದ್ದರು. ದಾವಣಗೆರೆ ಮತ್ತು ವೃತ್ತಿ ರಂಗಭೂಮಿಗೆ ಶತಮಾನದ ನಂಟಿದೆ. ಅವಿಭಜಿತ ವಿಜಯಪುರ ಜಿಲ್ಲೆಯು ಕನ್ನಡ ವೃತ್ತಿ ರಂಗಭೂಮಿಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಸ್ಮರಿಸಿದ ಅವರು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವೃತ್ತಿ ರಂಗಭೂಮಿ ಬಗ್ಗೆ ಮಾಹಿತಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ತೊಪ್ಪಲ ಕೆ. ಮಲ್ಲಿಕಾರ್ಜುನ ಗೌಡ ಪ್ರಾಸ್ತಾವಿಕ ಮಾತನಾಡಿ, ವೃತ್ತಿ ರಂಗಭೂಮಿ ಸಿನಿಮಾ ಜಗತ್ತಿಗೆ ಜನನ ನೀಡಿದೆ. ಡಾ. ರಾಜಕುಮಾರ್‌ರಂಥ ನಟರೂ ವೃತ್ತಿ ರಂಗಭೂಮಿಯಿಂದಲೇ ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎಂ. ಮಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಶ್ರುತಿರಾಜ್, ಐಕ್ಯುಎಸಿ ಸಂಚಾಲಕ ಡಾ.ಎಂ.ಪಿ. ಭೀಮಪ್ಪ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಜಿ. ಕಾವ್ಯಶ್ರೀ, ಡಾ.ಎನ್.ಎಂ. ಅಶೋಕ್ ಕುಮಾರ್, ಗೋವಿಂದ ಸ್ವಾಮಿ, ಡಾ. ಭಾರತಿ ಇತರರಿದ್ದರು.
ವೃತ್ತಿ ರಂಗಭೂಮಿ ರಂಗಾಯಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡದ ಸಕ್ಕರಿ ಬಾಳಾಚಾರ್ಯ (ಶಾಂತ ಕವಿ) ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net