

ದಾವಣಗೆರೆ: ಆಷಾಢ ಕಳೆದು ಶ್ರಾವಣ ಮಾಸದ ಆಗಮನವಾಗಿದೆ. ಶ್ರಾವಣದ ಮೊದಲ ದಿನ ಸೋಮವಾರ ವ್ಯಾಪಾರೋದ್ಯಮದಲ್ಲಿ ಹೊಸ ಸಂಚಲನ ತಂದಿದೆ. ಭಕ್ತರಲ್ಲೂ ಭಕ್ತಿಯ ಹುರುಪು ಹೆಚ್ಚಿಸಿದೆ.
ಶಿವನ ವಾರ ಎನ್ನಲಾದ ಸೋಮವಾರ ನಗರದ ಎಲ್ಲ ಶಿವಾಲಯಗಳು ಕಳೆಗಟ್ಟಿದ್ದವು. ಕೆಲವೆಡೆ ಬಾಳೆದಿಂಡು, ಮಾವಿನ ತೋರಣದ ಸಿಂಗಾರ ಕಣ್ಣಿಗೆ ರಾಚಿತು. ಬಗೆಬಗೆಯ ಹೂವು, ಬಿಲ್ವ ಪತ್ರೆಗಳಿಂದ ಶಿವನ ಮೂರ್ತಿಗಳನ್ನು ಅಲಂಕರಿಸಲಾಗಿತ್ತು. ಕೆಲವೆಡೆ ವಿದ್ಯುದಲಂಕಾರ ಕಂಗೊಳಿಸಿತು.
ನಸುಕಿನಿಂದಲೇ ಶಿವನ ಆರಾಧನೆಗೆ ದೇವಾಲಯಗಳು ಸಾಕ್ಷಿಯಾದವು. ಕೆಲವೆಡೆ ಶಿವನ ಹಾಡುಗಳು ಮಾರ್ಧನಿಸಿದವು. ಅರ್ಚಕರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮಾಡಿದರು.
ಭಕ್ತರು ಶಿವನ ದೇಗುಲಗಳಿಗೆ ತೆರಳಿ ಹೂವು-ಹಣ್ಣು, ತೆಂಗಿನಕಾಯಿ ಅರ್ಪಿಸಿದರು. ಈ ಬಾರಿ ಉತ್ತಮ ಮಳೆ ಜತೆಗೆ ನೆಮ್ಮದಿ ನೀಡುವಂತೆ ಪ್ರಾರ್ಥನೆ ಮಾಡಿದರು. ಆನೆಕೊಂಡದ ಬಸವೇಶ್ವರ ದೇವಸ್ಥಾನ ಸೇರಿ ಹಲವೆಡೆ ಭಕ್ತರಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರ ಪಕ್ಕದ ಲಿಂಗೇಶ್ವರ, ಪಾತಾಳ ಲಿಂಗೇಶ್ವರ, ಚೌಕಿಪೇಟೆಯ ಬಕ್ಕೇಶ್ವರ, ಹಳೇಪೇಟೆಯ ವೀರಭದ್ರೇಶ್ವರ, ಕೊಟ್ಟೂರೇಶ್ವರ, ವಿನೋಬನಗರದ ಶಂಭುಲಿಂಗೇಶ್ವರ, ವಿದ್ಯಾನಗರದ ಈಶ್ವರ ಪಾರ್ವತಿ, ಆವರಗೆರೆಯ ಮಂಜುನಾಥ ಸ್ವಾಮಿ ದೇವಸ್ಥಾನಗಳತ್ತ ಬೆಳಗ್ಗೆ ಜನರ ದಂಡು ಹರಿದುಬಂದಿತು. ಅಕ್ಕ-ಪಕ್ಕದ ತಾಲೂಕುಗಳ ಶಿವಾಲಯಗಳಲ್ಲೂ ಜನಸಂದಣಿ ಇತ್ತು.
ಶ್ರಾವಣದ ಹಿನ್ನೆಲೆಯಲ್ಲಿ ಹೂವಿನ ಮಾರುಕಟ್ಟೆಗೆ ಸೋಮವಾರ 1.5 ಟನ್‌ನಷ್ಟು ಹೆಚ್ಚಿನ ಹೂವಿನ ಆವಕವಾಗಿದೆ. ಆದರೆ ಬೆಲೆಯಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಮಂಗಳವಾರ ಮಂಗಳಗೌರಿ ವ್ರತಾಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಬಹುದು ಎನ್ನುತ್ತಾರೆ ಸಗಟು ಹೂವಿನ ವ್ಯಾಪಾರಿಗಳು.
ಈ ಹಿಂದೆ ಮಳೆಯ ಹೊಡೆತಕ್ಕೆ ಹೂವಿನ ಇಳುವರಿ ಕುಸಿದಿತ್ತು. ಮಳೆ ತಗ್ಗಿದ್ದರೂ ಹೂವಿನ ಮಾರಾಟ ನಿರೀಕ್ಷಿತವಾಗಿಲ್ಲ. ಶ್ರಾವಣದ ಬೆನ್ನಲ್ಲೇ ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ಕೃಷ್ಣ ಜನ್ಮಾಷ್ಟಮಿ ಮೊದಲಾದ ಸಾಲುಸಾಲು ಹಬ್ಬುಗಳು ಬರಲಿದ್ದು ಹೂವಿನ ಬೆಲೆ ಗಗನಮುಖಿಯಾಗುವ ನಿರೀಕ್ಷೆ ಇದೆ.
ಇನ್ನು ಹೆಂಗಳೆಯರಿಗೆ ಶ್ರಾವಣ ಎಂದರೆ ಹಿರಿಹಿರಿ ಹಿಗ್ಗು. ಡಬಲ್ ಡಿಸ್ಕೌಂಟ್, ಡಬಲ್ ಪ್ಲಸ್ 10 ಡಿಸ್ಕೌಂಟ್ ಘೋಷಣೆಗಳು ಜವಳಿಯಂಗಡಿಗಳ ನಡುವೆಯೇ ಸ್ಪರ್ಧೆಗೆ ಹಚ್ಚಿದಂತಿದೆ. ಹೀಗಾಗಿ ಹೆಣ್ಣುಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿವೆ.
ಚಿನ್ನದ ಬೆಲೆ ಕಳೆದೊಂದು ವಾರದಿಂದ ಇಳಿಕೆಯಾಗಿರುವ ಹಿನ್ನೆಲೆಯಲ್ಲೂ ಮದುವೆ ಇತರೆ ಶುಭ ಕಾರ್ಯಕ್ರಮಗಳಿಗಾಗಿ ಚಿನ್ನ-ಬೆಳ್ಳಿ ಖರೀದಿಸಲು ಜ್ಯುಯೆಲರಿ ಅಂಗಡಿಗಳತ್ತ ಮುಗಿ ಬೀಳುತ್ತಿದ್ದಾರೆ. ಕೆಲವು ಧಾನ್ಯಗಳ ಬೆಲೆ ತುಸು ಏರಿಕೆಯಾಗಿದ್ದರೂ ಖರೀದಿಗೆ ಕಿರಾಣಿ ಅಂಗಡಿಗಳಿಗೆ ಜನರು ದೌಡಾಯಿಸುತ್ತಿದ್ದಾರೆ.
--