

ದಾವಣಗೆರೆ: ಜಾತಿ ಜನಗಣತಿ ಸಂಬಂಧ, ರಾಜ್ಯ ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸುವುದನ್ನು ವಿರೋಧಿಸಿದ ಐದುನೂರಕ್ಕೂ ಹೆಚ್ಚು ಗಣತಿದಾರ ಶಿಕ್ಷಕ ವೃಂದ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿತು.
ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಮೇಲೆ ಕೂತ ಶಿಕ್ಷಕರು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಾಳೆಯಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮರು ಗಣತಿಗೆ ತೆರಳುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಹಲವಾರು ಸವಾಲುಗಳ ನಡುವೆಯೂ ಜಿಲ್ಲೆಯಲ್ಲಿ ಶೇ.97ಕ್ಕಿಂತ ಅಧಿಕ ಗಣತಿ ಕಾರ್ಯ ಮುಗಿಸಿದ್ದೇವೆ. ಇದೀಗ ಪ್ರತಿ ಗಣತಿದಾರರು ತಮಗೆ ನಿಗದಿಪಡಿಸಿದ 150 ಮನೆಗಳಿಗೆ ತೆರಳಿ 6 ವರ್ಷದೊಳಗಿನ ಮಕ್ಕಳ ಗಣತಿ ಮಾಡಬೇಕೆಂದು ಆದೇಶಿಸಿರುವುದು ಸರಿಯಲ್ಲ. ಸ್ವಲ್ಪ ವಿಷ ಕೊಡಿ, ಇಲ್ಲವೇ ಗಣತಿ ಕಾರ್ಯದಿಂದ ಮುಕ್ತಿ ಕೊಡಿ ಎಂದೂ ತಮ್ಮ ಅಸಹನೆ ತೋಡಿಕೊಂಡರು.
ಶಿಸ್ತು ಕ್ರಮದ ಎಚ್ಚರಿಕೆಯಿಂದ ನೌಕರರು ಸಾಕಷ್ಟು ನೊಂದಿದ್ದೇವೆ. ಇದು ನಿಲ್ಲಬೇಕು. ಗಣತಿ ಕಾರ್ಯದ ವೇಳೆ ಆಗಿರುವ ಎಲ್ಲ ತೊಂದರೆಗಳಿಂದ ನಾವು ಮಾನಸಿಕವಾಗಿ ನೊಂದಿದ್ದೇವೆ. ತಕ್ಷಣವೇ ಸಮೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಿ ಶಾಲೆಗಳಿಗೆ ತೆರಳಲು ಅವಕಾಶ ನೀಡಬೇಕೆಂದು ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯು ಸೆ.22ರಿಂದ ಅ.7ರವರೆಗೆ ಅಂತಿಮಗೊಂಡಿದ್ದರೂ ಅ.18ರವರೆಗೆ ವಿಸ್ತರಿಸಲಾಗಿದೆ. ಆದರೆ ಶೂನ್ಯದಿಂದ 6 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸುವಂತೆ ಗಣತಿ ಮೇಲ್ವಿಚಾರಕರು ತಿಳಿಸಿದ್ದಾರೆ.
ಸಮೀಕ್ಷೆ ವೇಳೆ ಆದ ನಿಂದನೆ, ಅವಮಾನ, ತೊಂದರೆಗಳು ಹಾಗೂ ಮೇಲ್ವಿಚಾರಕರು ನಿಯಮಮೀರಿ ಒತ್ತಡ ಹಾಕುತ್ತಿರುವ ವಿಚಾರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ನಡೆಸಿದ ತುರ್ತು ಸಭೆಯಲ್ಲಿ ಚರ್ಚಿಸಲಾಗಿದೆ. ಮರು ಸಮೀಕ್ಷೆ ಕಾರ್ಯ ನಿರ್ವಹಿಸದಿರಲೂ ತೀರ್ಮಾನಿಸಲಾಗಿದೆ. ಹೀಗಾಗಿ ಸಮೀಕ್ಷೆದಾರರು ಮತ್ತು ಸಂಘದ ತೀರ್ಮಾನಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದ ಮನವಿಪತ್ರವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಸಲ್ಲಿಸಲಾಯಿತು.
ಅ.18 ರವರೆಗೆ ಮರು ಸಮೀಕ್ಷೆ ಮಾಡಬೇಕು. ಬಿಪಿಎಲ್ ಕಾರ್ಡ್‌ಗಳೊಂದಿಗೆ 6 ವರ್ಷದೊಳಗಿನ ಮಕ್ಕಳು, ಕೈಬಿಟ್ಟುಹೋದವರ ಗಣತಿ ಕಾರ್ಯ ಮಾಡಲು ಜಿಲ್ಲಾಡಳಿತ ಮತ್ತು ಮೇಲಧಿಕಾರಿಗಳು ಆದೇಶಿಸಿರುವುದು ಸರಿಯಲ್ಲ. ಮರು ಸಮೀಕ್ಷೆಯಿಂದ ಹಿಂದುಳಿಯುವ ಬಗ್ಗೆ ನಿರ್ಣಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ ಹೇಳಿದರು.
ಗಣತಿ ಸಂಬಂಧ ತರಬೇತಿ ಕೊರತೆಯಾಗಿದೆ. ಗಣತಿ ವೇಳೆ ಮಹಿಳಾ ನೌಕರರಿಗೆ ಶೌಚದ ಸಮಸ್ಯೆ ಕಾಡಿದೆ. ಹಲವರಿಗೆ ನಾಯಿ ಕಚ್ಚಿವೆ. ಯುಎಚ್‌ಐಡಿ ಸ್ಟಿಕರ್ ಸರಿಯಾಗಿ ಅಂಟಿಸದಿರುವುದರ ನ್ಯೂನತೆ ನಡುವೆಯೂ ಶೇ.97 ರಷ್ಟು ಸರ್ವೇ ಕಾರ್ಯ ಮುಗಿದಿದೆ. ಈಗ ಮರು ಸಮೀಕ್ಷೆಗೆ ಆದೇಶಿಸಿ ಸಂಪೂರ್ಣ ಮಾಹಿತಿ ದಾಖಲಿಸುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲ ತರಬೇತಿ ವೇಳೆಯಲ್ಲೇ 6 ವರ್ಷದೊಳಗಿನ ಮಕ್ಕಳ ಗಣತಿ ಬೇಡ ಎಂದಿದ್ದರಿಂದ ಗಣತಿದಾರರು ಸಮೀಕ್ಷೆ ಮಾಡಿರಲಿಲ್ಲ. ಈಗ ಹೊಸದಾಗಿ ಸೇರ್ಪಡೆ ಮಾಡಿ ಸಂದೇಶ ನೀಡಿರುವುದು ಮತ್ತೆ ಮನೆ ಮನೆಗೆ ತೆರಳುವುದು ಕಷ್ಟಸಾಧ್ಯ ಎಂದು ರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ತಿಳಿಸಿದರು.
ಈಗಾಗಲೆ ಗಣತಿಯಾದ ಮನೆಗಳಿಗೆ ಮರು ಸಮೀಕ್ಷೆ ಹೋಗುವುದು ಅಸಾಧ್ಯ. ಇದರ ಬದಲು ಮಕ್ಕಳ ಪಟ್ಟಿ ನೀಡಿ ಇಂತಹ ಮನೆಗಳನ್ನು ಸರ್ವೇ ಮಾಡಲು ಸೂಚಿಸಿದರೆ ಪರಿಗಣಿಸಬಹುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಫಾಲಾಕ್ಷಿ, ಖಜಾಂಚಿ ತಿಪ್ಪೇಸ್ವಾಮಿ, ರಾಜ್ಯ ಜಂಟಿ ಕಾರ್ಯದರ್ಶಿ ಶಿವಣ್ಣ, ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ಮಂಜಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಮಪ್ಪ, ಕರಿಬಸಪ್ಪ, ರವಿಶಂಕರ್, ಜಿಪಿಟಿ ಸಂಘದ ಎ.ಮಾರುತಿ, ಎಸ್.ಮಹಾಂತೇಶ, ಮಹಾರುದ್ರಪ್ಪ ಇತರರಿದ್ದರು.
----
ಡಿಸಿ ದಿಢೀರ್ ವಿಡಿಯೋ ಸಂವಾದ
ಗಣತಿದಾರರ ಅಸಮಾಧಾನದ ಬೆನ್ನಲ್ಲೇ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಮಂಗಳವಾರ ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಈಗಾಗಲೆ ಗಣತಿದಾರರು ಸಮೀಕ್ಷೆ ನಡೆಸಿದ್ದು ಮತ್ತೊಮ್ಮೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲು ಹೇಳುವುದು ಉಚಿತವಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳುವ ಬಗ್ಗೆ ಚರ್ಚೆ ಹಂತದಲ್ಲಿದೆ ಎಂದು ತಿಳಿದುಬಂದಿದೆ.