ಶಿಕ್ಷಕರಿಗೆ ಬೇಕು ಪ್ರತ್ಯೇಕ ಬಜೆಟ್     ವೀರಣ್ಣ ಮಡಿವಾಳರ ಆಗ್ರಹ

1000349310.jpg
Published on

ದಾವಣಗೆರೆ: ಸರ್ಕಾರ ಶಿಕ್ಷಣಕ್ಕೆ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ಮುಂದಾಗಬೇಕು ಎಂದು  ಬೆಳಗಾವಿ ಜಿಲ್ಲೆಯ ರಾಯಭಾಗದ ಶಿಕ್ಷಕ ವೀರಣ್ಣ ಮಡಿವಾಳರ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿದರು.
ದೆಹಲಿ, ಆಂಧ್ರ ಪ್ರದೇಶ ಹಾಗೂ ಕೇರಳದಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಕೂಡ  ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರು ತಮ್ಮ ಒಂದು ತಿಂಗಳ ವೇತನವನ್ನು ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ  ನೀಡಿದರೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಿಸಬಹುದು. ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮ ಮಕ್ಕಳನ್ನು  ಸರ್ಕಾರಿ ಶಾಲೆಗಳಲ್ಲಿ ಓದಿಸಲು ಮುಂದಾಗಬೇಕು. ಶಿಕ್ಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ತಿಳಿಸಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣ ಹೀಗೆ ಎಲ್ಲದಕ್ಕೂ ಹೆಚ್ಚು ಅಂಕ ಗಳಿಕೆಯೇ ಮಾನದಂಡವಾಗಿದೆ. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ತನ್ನದೇ ಆದ ಪ್ರತಿಭೆ ಇರುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಯಿಸಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಆರ್‌ಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ. ಶ್ರೀನಿವಾಸ ಮೂರ್ತಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ ವಿದ್ಯಾರ್ಥಿಗಳು ಪರಿಪೂರ್ಣ ಅಂಕ ಪಡೆದಿರುವುದು ಉತ್ತಮ ಸಾಧನೆ. ಐಎಎಸ್, ಐಪಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡದಲ್ಲಿ ಬರೆಯಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಕೆ. ಕೆ. ಪ್ರಕಾಶ, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಸಂಗೀತಾ ನರೇಂದ್ರ ಜೈನ್, ಶ್ರೀನಿವಾಸ ಚಿನ್ನಿಕಟ್ಟಿ ಇತರರು ಇದ್ದರು.
ಕೋಮಲ್ ಕುಂದಪ್ಪ ಜೈನ್ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ  ಡಾ.ಎಸ್.ಎ.ಗಿರಿಧರ್, ಎಚ್.ವಿ.ಶ್ರೀನಿವಾಸ, ಮಹಾದೇವ, ಎಚ್.ಟಿ.ರಮೇಶ, ಬಸವರಾಜ ಸಾಗರ್, ಬಿ.ಎಂ. ಶಿವಕುಮಾರ್, ಎಸ್.ಕೆ.ಒಡೆಯರ್, ವಿಜಯಕುಮಾರ ಜಾಧವ್, ವೈ.ಎಲ್.ಹನುಮಂತರಾಜ್ ಇತರರನ್ನು ಗೌರವಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಸ್ವಾಗತಿಸಿದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net