

ದಾವಣಗೆರೆ: ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಮೂಲ ಶಿಕ್ಷಣ ಮತ್ತು ಸಂಖ್ಯಾಶಾಸ್ತ್ರ, ಓದುವಿಕೆ, ಬರವಣಿಗೆ, ಸಂವಹನ ಹಾಗೂ ಗಣಿತದ ಕಲಿಕಾ ಕೌಶಲಗಳನ್ನು ಕಲಿಸಬೇಕಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಶಿಸಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
8, 10 ಮತ್ತು 12ನೇ ತರಗತಿ ಮಕ್ಕಳನ್ನು ಸರ್ವ ಶಿಕ್ಷಣ ಅಭಿಯಾನದಡಿ ಕೇಂದ್ರೀಕರಿಸುತ್ತೇವೆ. ಆದರೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಹಂತದಲ್ಲಿ ಸವಾಲು ಎದುರಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳು ಅಕಾಡೆಮಿಕ್ ಆಗಿ ಉತ್ತಮವಾಗಿ ಓದಿದ್ದರೂ ವೃತ್ತಿ ಶಿಕ್ಷಣ ಸಂಬಂಧಿತ ಉದ್ಯೋಗ ಗಳಿಸಲಾಗುತ್ತಿಲ್ಲ. ಮೃದು ಕೌಶಲಗಳ ಅಭಾವವನ್ನು ನೀಗಬೇಕಿದೆ ಎಂದು ಹೇಳಿದರು.
ದೇಶದಲ್ಲಿ ಶೇ.74, ರಾಜ್ಯದಲ್ಲಿ ಶೇ. 75ರಷ್ಟು ಸಾಕ್ಷರತೆ ಪ್ರಮಾಣವಿದೆ. ಜಿಲ್ಲೆಯಲ್ಲಿ ಕೊರತೆ ಇರುವ ಪ್ರತಿಶತ 23ರ ಅಂತರವನ್ನು ಭರ್ತಿ ಮಾಡಬೇಕಿದೆ. ಅಧಿಕಾರಿಗಳು, ಶಿಕ್ಷಕರು, ಆಡಳಿತ ಎಲ್ಲರೂ ಗುರಿ ರೂಪಿಸಿ ಶ್ರಮಿಸಿದರೆ ಕಷ್ಟವಲ್ಲ ಎಂದೂ ತಿಳಿಸಿದರು.
ಬೋಧನೆಯೊಂದೇ ಶಿಕ್ಷಕರ ಕೆಲಸವಲ್ಲ. ತರಗತಿಯಾಚೆಗೂ ಜವಾಬ್ದಾರಿ ಇದೆ. ಕೌಶಲ ಗುರುತಿಸಿ ಉತ್ತೇಜಿಸುವುದು, ಕೌಶಲವಿಲ್ಲದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕೆಲವರು ಒಂಟಿ ಪಾಲಕರ, ಅನಾಥ ಮಕ್ಕಳು ಇದ್ದಾರೆ. ಅವರನ್ನು ಓದಿಸುವ ಸವಾಲು ನಿಮ್ಮ ಮೇಲಿದೆ ಎಂದು ಹೇಳಿದರು.
ಇಂದಿನ ಮಕ್ಕಳಲ್ಲಿ ಓದುವ ಹವ್ಯಾಸವಿಲ್ಲ. ಗ್ರಂಥಾಲಯದಲ್ಲಿ ಸಾಧಕರ ಆತ್ಮಚರಿತ್ರೆ ಇತರೆ ಪುಸ್ತಕಗಳನ್ನು ಓದಿಸುವ ಮತ್ತು ಓದಿದ ಪುಸ್ತಕಗಳ ಬಗ್ಗೆ ಮಕ್ಕಳಿಂದಲೇ ವಿಮರ್ಶೆ ಬರೆಸಬೇಕಿದೆ. ಆಗ ಮಕ್ಕಳಲ್ಲಿ ವಿಶಿಷ್ಟ ಚಿಂತನೆ ಬೆಳೆಯಲಿದೆ ಎಂದರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆ ರಾಜ್ಯ ಮಟ್ಟದಲ್ಲಿ 23 ನೇ ಸ್ಥಾನದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯಾವ ಸ್ಥಾನ ತರುವ ಭರವಸೆಯನ್ನು ನೀವು ಹೊಂದಿದ್ದೀರಿ ಎಂಬುದನ್ನು ಆಲೋಚಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಸಂಸದರ ಆಶಯದಂತೆ ಮುಂದಿನ ಶೈಕಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ ಐದು ಸ್ಥಾನಗಳ ಒಳಗೆ ತರಬೇಕು ಎಂದ ತಾಕೀತು ಮಾಡಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಅನಗತ್ಯವಾಗಿ ತೇರ್ಗಡೆಗೊಳಿಸುತ್ತಿರುವುದು, ಸಕಾಲಕ್ಕೆ ಶಾಲೆಗೆ ಹಾಜರಾಗದಿರುವ ಶಿಕ್ಷಕರ ಅಶಿಸ್ತು ಸರಿಯಲ್ಲ ಎಂದರು.
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ ಅಸರ್ ಎಂಬ ಎನ್‌ಜಿಒ ಸಂಸ್ಥೆ ವರದಿ ಪ್ರಕಾರ 10 ನೇ ತರಗತಿವರೆಗೆ ಏನೂ ಕಲಿಯಲಾರದೆ ಉಳಿಯುವವರು ಶೇ.39ರಷ್ಟು ಮಕ್ಕಳಿದ್ದಾರೆ. ಶಿಕ್ಷಣದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಡಯಟ್ ಸಂಸ್ಥೆ ಕಾರ್ಯ ನಿರ್ವಹಿಸಬೇಕಿದೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಈ ವಿಚಾರವಾಗಿ ಶಿಕ್ಷಕರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಪಠ್ಯೇತರ ಚಟುವಟಿಕೆಗಳ ಸಹಿತ ಶಿಕ್ಷಣ ನೀಡುವತ್ತ ಶೈಕ್ಷಣಿಕ ಕಲಿಕೆಯ ಪದ್ಧತಿ ಬದಲಾಗಬೇಕು. ಕ್ಲಸ್ಟರ್, ವಲಯ ಹಾಗೂ ಡಯಟ್ ಹಂತದಲ್ಲಿ ಬದಲಾವಣೆ ಆಗಬೇಕು. ನಿವೃತ್ತ ಶಿಕ್ಷಕರು ಶಿಕ್ಷಣದ ಗುಣಮಟ್ಟಕ್ಕೆ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.
ವಾಣಿಜ್ಯ ತೆರಿಗೆ ಪರಿವೀಕ್ಷಕ ಎಚ್.ಎಂ. ಪ್ರವೀಣ್‌ಕುಮಾರ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನ್‌ಪುರ, ಡಿಡಿಪಿಐ ಜಿ. ಕೊಟ್ರೇಶ್, ಡಯಟ್ ಉಪನಿರ್ದೇಶಕಿ ಎಸ್. ಗೀತಾ, ಬಿಇಒ ಪುಷ್ಪಲತಾ, ವಯಸ್ಕರ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹೇಶ್, ಶಿಕ್ಷಕರ ಸಂಘಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಇದ್ದರು. ಚಿತ್ರಕಲಾ ಪ್ರದರ್ಶನ ನಡೆಯಿತು.
---
ಸರ್ಕಾರಿ ಶಾಲೆಗೆ ಕಳಿಸಿದ್ರೆ
ಗೃಹಲಕ್ಷಿ ಹಣ ಹೆಚ್ಚಳ!
ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಗೃಹಿಣಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 3 ಸಾವಿರ ರೂ. ನೀಡಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಆಗಲಿವೆ ಎಂದು ಹೇಳಿದರು.
ಶಿಕ್ಷಕರ ನೇಮಕಾತಿಯಲ್ಲಿ ಪದವೀಧರ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಬಡ್ತಿ ಕಲ್ಪಿಸಲು ಸಿಎಂ ಜತೆ ಸಮಾಲೋಚನೆ ಮಾಡುವುದಾಗಿ ಹೇಳಿದರು. ಸರ್ಪಪಲ್ಲಿ ರಾಧಾಕೃಷ್ಣನ್ ಆಸ್ತಿಯಿಂದ ಹೆಸರು ಗಳಿಸಲಿಲ್ಲ. ಜಾತಿ ವ್ಯವಸ್ಥೆ ಪ್ರಬಲವಾಗಿದ್ದ ಕಾಲದಲ್ಲಿ ಜ್ಯೋತಿ ಬಾಫುಲೆ ದಲಿತರ ಮಕ್ಕಳಿಗೆ ಶಿಕ್ಷಣ ಕಲ್ಪಿಸಿದರು. ಈ ಮಹನೀಯರಂತೆ ಉತ್ತಮ ಶಿಕ್ಷಕರಾಗಿ ಎಂದು ಕೋರಿದರು.
----
ಪ್ರಶಸ್ತಿ ವಿತರಣೆ
18 ಟೀಚರ್‌ಗಳಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವರ ಇಂತಿದೆ. ಆಸಿಯಾ ಪರ್ವಿನ್, ನಸೀಮಾ ಬಾನು, ಎನ್. ಹಾಲೇಶಪ್ಪ, ಯಶೋದಾ ಬಾರ್ಕಿ, ಆರ್. ಶಿವಕುಮಾರ್, ಡಿ.ಎಸ್. ವೆಂಕಟೇಶ ರಾವ್, ಬಿ.ಎಸ್. ಉಷಾ, ರೇಷ್ಮಾ ಬಾನು, ರೆಹಾನಾ ಬಾನು, ಎಚ್.ಆರ್. ಪ್ರಕಾಶ್, ಪಿ.ಆರ್. ಮಲ್ಲಿಕಾರ್ಜುನಯ್ಯ, ಬಿ.ಎಚ್. ಲೀಲಾವತಿ,ಜಿ.ಎಸ್. ಸಂಗಮೇಶ್, ಪಿ. ನಾಗೇಂದ್ರಪ್ಪ, ವಿಶ್ವನಾಥ್ ಜಂಬಗಿ, ಜಿ.ಸಿ. ಶಿವಪ್ರಸಾದ್ ಕುಮಾರ್, ಕೆ.ಆರ್. ಶೋಭಾ, ಕೃಷ್ಣಾನಾಯ್ಕ.
----