

ದಾವಣಗೆರೆ: ಭೂ ಮಾಪಕರು ಭೂ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿ ಸರಿಪಡಿಸುವ ಜತೆಯಲ್ಲೇ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಭೂದಾಖಲೆಗಳ ನಿರ್ದೇಶಕಿ ಭಾವನಾ ಬಸವರಾಜ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಭೂಮಿ ಅಳತೆ ಮಾಡುವಾಗ ಒತ್ತುವರಿ ಬರುವುದು ಸಹಜ. ಅದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸರಿಪಡಿಸಬೇಕು ಎಂದು ಕೇಳಿದರು.
ಭೂಮಿ ಅಳತೆ ಮಾಡುವ ನೆಪದಲ್ಲಿ ರೈತರಿಂದ ಲಂಚದ ಆಮಿಷಕ್ಕೆ ಬಲಿಯಾಗದೆ ಅವರ ಭೂಮಿಯನ್ನು ಸಕಾಲಕ್ಕೆ ಅಳತೆ ಮಾಡಿಕೊಡಬೇಕು. ಮತ್ತು ಇಲಾಖೆಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕೆಂದರು.
ಕಿರಿಯ ಭೂಮಾಪಕರು ಹಿರಿಯ ಭೂ ಮಾಪಕರ ಮಾರ್ಗದರ್ಶನ ಪಡೆಯಬೇಕು. ಹಿರಿಯ ಭೂ ಮಾಪಕರ ಬಗ್ಗೆ ರೈತರಿಂದ ಯವುದೇ ದೂ ಬಂದಿಲ್ಲ. ಅದೇರೀತಿ ಕಿರಿಯ ಭೂ ಮಾಪಕರು ನಡೆದುಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಕಸ್ತೂರಿ ಮನೋಜ್, ಬಿ.ಎನ್. ನಾಗಭೂಷಣ, ನರಸಿಂಹಪ್ಪ, ಡಾ. ರಂಗನಾಥ್, ಬಿ.ಆರ್. ಭಾಸ್ಕರ್, ಯು. ನಾಗರಾಜ್, ಕೃಷ್ಣಮೂರ್ತಿ, ಸಿದ್ದಯ್ಯ, ಸಂಘದ ಪದಾಧಿಕಾರಿಗಳಿದ್ದರು. ಐಶ್ವರ್ಯಾ ಸ್ವಾಗತಿಸಿದರು. ನಟೇಶ್ ವಂದಿಸಿದರು.