

ದಾವಣಗೆರೆ: ಉದ್ಯೋಗ ಅರಸಿ ವಿದೇಶಗಳಿಗೆ ತೆರಳುವ ನಮ್ಮಲ್ಲಿನ ವಿದ್ಯಾವಂತರು ಅಲ್ಲಿಯೇ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಿವೆ ಎಂದು ರಾಜ್ಯಸಭಾ ಸದಸ್ಯ ಕೆ. ನಾರಾಯಣ ವಿಷಾದಿಸಿದರು.
ಕರ್ನಾಟಕ ದೇವಾಂಗ ಸಂಘ ಹಾಗೂ ಜಿಲ್ಲಾ ದೇವಾಂಗ ಸಮಾಜ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನಡಾದ ರೆಸ್ಟೋರೆಂಟ್ ಎದುರು 3 ಸಾವಿರ ಮಂದಿ ಕೆಲಸಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಭಾರತದಲ್ಲೇ ಉದ್ಯೋಗಾವಕಾಶ ಇರುವಾಗ ಇಲ್ಲಿನ ಮುಕ್ಕಾಲು ಭಾಗದಷ್ಟು ವಿದ್ಯಾವಂತರ ವಿದೇಶ ಪಲಾಯನ ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಉದ್ಯೋಗದ ನೆಪದಲ್ಲಿ ವಿದೇಶಗಳಿಗೆ ಹೋದವರು ಭಾರತಕ್ಕೆ ಮರಳುತ್ತಿಲ್ಲ. ಪಾಲಕರನ್ನು ನೋಡಿಕೊಳ್ಳುತ್ತಿಲ್ಲ. ಈ ಪ್ರವೃತ್ತಿ ನಿಲ್ಲಬೇಕು. ಪಾಲಕರು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಬಿತ್ತಬೇಕು. ಹಾಗಾದಾಗ ಅವರು ರಾಷ್ಟ್ರಕ್ಕೆ ಕೊಡುಗೆ ನೀಡಬಲ್ಲರು ಎಂದು ಹೇಳಿದರು.
ಜಪಾನ್ ಚಿಕ್ಕ ದೇಶ. ಅಲ್ಲಿ 10 ವರ್ಷದೊಳಗಿನವರೆಗೆ ಮಕ್ಕಳ ಮೇಲೆ ಯಾವುದೇ ಶೈಕ್ಷಣಿಕ ಒತ್ತಡ ಹಾಕುವುದಿಲ್ಲ. ಅವರ ಆಸಕ್ತಿಗನುಸಾರ ಶಿಕ್ಷಣ ನೀಡುತ್ತಾರೆ. ಹೀಗಾಗಿ ಜಪಾನ್ ಮುಂದುವರಿದ ದೇಶವಾಗಿ ನಿಂತಿದೆ. ಭಾರತದಲ್ಲಿ ಶಿಶುವಿಹಾರದಿಂದಲೇ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಇದರೆ ಜತೆ ಮೊಬೈಲ್ ವ್ಯಸನವೂ ಹೆಚ್ಚಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಕ್ಕಳು ಶೇ.99ರಷ್ಟು ಅಂಕ ಪಡೆದರೂ ಪಾಲಕರಲ್ಲಿ ತೃಪ್ತಿ ಇರುವುದಿಲ್ಲ. ಹೆಚ್ಚು ಅಂಕ ಪಡೆದ ಮಕ್ಕಳೊಂದಿಗೆ ಹೋಲಿಕೆ ಮಾಡುತ್ತಾರೆ. ಶಿಕ್ಷಣದಲ್ಲಿ ಅಂಕವೇ ಮಾನದಂಡ ಆಗಬಾರದು. ಮಕ್ಕಳಿಗೆ ಒತ್ತಡ ಹಾಕಬಾರದು ಎಂದು ಕಿವಿಮಾತು ಹೇಳಿದರು. ಕಲಾವಿದರು, ರಾಜಕಾರಣ ಇತರೆ ಕ್ಷೇತ್ರಗಳ ಸಾಧಕರನ್ನೂ ಪುರಸ್ಕರಿಸಬೇಕೆಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೇಮಕೂಟದ ಗಾಯತ್ರಿ ಪೀಠ ಮಹಾಸಂಸ್ಥಾನದ ಶ್ರೀ ದಯಾನಂದಪುರಿ ಸ್ವಾಮೀಜಿ, ದೇವಾಂಗ ಸಮಾಜದಲ್ಲಿ ಅನೇಕರು ಬಡತನದಲ್ಲಿದ್ದರೂ ಕಳೆದ 10 ವರ್ಷದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುತ್ತಿದ್ದಾರೆ. ಮಕ್ಕಳ ಬೆಳವಣಿಗೆಗೆ ದಾನಿಗಳು, ಸಂಘಟಕರೂ ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆ ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕೆ ಬಳಕೆಯಾಗಬೇಕು ಎಂದರು.
ಸಾಹಿತಿ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ ದೇವರ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ವಿರೋಧಿಸಿ, ಸಮಾಜವನ್ನು ಗಟ್ಟಿಗೊಳಿಸಿದವರು ದೇವರ ದಾಸಿಮಯ್ಯ ಅವರು. 11ನೇ ಶತಮಾನದಲ್ಲಿ ಚಿಕಿತ್ಸಕ ಬೀಜ ಬಿತ್ತಿದ ಹಾಗೂ ಸಾಂಸ್ಕೃತಿಕ ಏಳಿಗೆಗೆ ಕಾರಣವಾದ ಸಮಾಜವಿದು ಎಂದು ಬಣ್ಣಿಸಿದರು.
ಜಾತಿ-ಕುಲ ಮೂಲದಿಂದ ಮುಕ್ತರಾಗಬೇಕೆಂದು ದೇವರ ದಾಸಿಮಯ್ಯ ಸಂದೇಶ ಸಾರಿದ್ದರು. ಅವರ ಚಿಂತನೆಯನ್ನು ಸಮಾಜದಲ್ಲಿ ಬಿತ್ತರಿಸಬೇಕು. ದೇವಾಂಗ ಸಂಘದಲ್ಲಿ ಸಂಗ್ರಹವಾಗಿರುವ ಹಣದಲ್ಲಿ ದೇವರ ದಾಸಿಮಯ್ಯ ಅವರ ಹೆಸರಿನಲ್ಲಿ ಅಧ್ಯಯನ ಅಥವಾ ಸಂಶೋಧನಾ ಕೇಂದ್ರವೊಂದನ್ನು ತೆರೆಯಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಪಿ ಕಲಬುರ್ಗಿ, ದಾವಣಗೆರೆ- ಬೆಂಗಳೂರಲ್ಲಿ ಸಂಘಕ್ಕೆ ನಿವೇಶನ ಪಡೆಯಬೇಕಿದೆ. 70 ಲಕ್ಷದಷ್ಟಿರುವ ಸಮಾಜದ ವಿದ್ಯಾನಿಧಿಯನ್ನು 1 ಕೋಟಿ ರೂ.ಗೆ ಏರಿಸುವುದು, 7 ಸಾವಿರ ಇರುವ ಸದಸ್ಯತ್ವವನ್ನು 10 ಸಾವಿರಕ್ಕೆ ತಲುಪಿಸುವುದು ಸಂಘದ ಸಂಕಲ್ಪವಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ದಯಾನಂದಪುರಿ ಸ್ವಾಮೀಜಿಗಳ 35ನೇ ವಾರ್ಷಿಕ ಪಟ್ಟಾಭಿಷೇಕ ಹಾಗೂ ಬೆಳ್ಳಿ ತುಲಾಬಾರ, ರಾಜ್ಯ ದೇವಾಂಗ ಸಮಾಜದ ಸಮಾವೇಶ ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರನ್ನೂ ಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 395 ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು. ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಾ. ಜಿ.ರಮೇಶ್, ಹಾವೇರಿ ಡಿಡಿಪಿಐ ಸುರೇಶ್ ಹುಗ್ಗಿ, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಡಾ. ಎಸ್. ರಂಗನಾಥ್, ಎಂ.ಪಿ.ಉಮಾಶಂಕರ್, ಬಿ.ಎನ್.ಬಾಬು, ಟಿ. ರಾಜೇಶ್, ಸಿ.ಎಲ್. ಧನಪಾಲ್, ಎಂ.ಎಸ್. ಜಯಪ್ರಕಾಶ್, ಬಿ. ಮೋಹನ್ ಇತರರಿದ್ದರು.