ಗಟ್ಟಿ ಹೋರಾಟದ ಗುಣ ಬೆಳೆಸಿಕೊಳ್ಳಿ

1001246341.jpg
Published on

ದಾವಣಗೆರೆ: ಸಂಘಟನೆಯ ಪದಾಧಿಕಾರಿಗಳು ಸಂಕೋಚ ಬದಿಗಿಡಬೇಕು. ಶಿಸ್ತು, ಜವಾಬ್ದಾರಿಯುತ ಹೋರಾಟ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.

ಹೊರವಲಯದ ಆದ್ಯ ರೆಸ್ಟೋರೆಂಟ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂಘಟನೆಯಡಿ ಮಾಡಿದ ಗಟ್ಟಿ ಹೋರಾಟಗಳ ಫಲವಾಗಿ ಕೆಜಿಎಫ್ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಅನಾಯಾಸ ಟಿಕೆಟ್ ದೊರೆತು ಶಾಸಕನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನೀವೂ ಕೂಡ ನೊಂದವರ ಪರವಾಗಿ ಕೆಲಸ ಮಾಡಿ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಾಮೂಹಿಕ ಹೋರಾಟ ಮಾಡಿ ಎಂದು ಹೇಳಿದರು.

ಇಂದು ಜಾತಿ ಆಧಾರದಡಿ ಸಂಘಟನೆಗಳು ಜನ್ಮ ತಾಳುತ್ತಿವೆ. ಇದು ತಪ್ಪಲ್ಲ. ಆದರೆ ಯಾವುದೇ ಸಂಘಟನೆಗಳು ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಬೇಕಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯಲಿಕ್ಕೆ ಸೀಮಿತವಾಗಿ ಜಾತಿ ಬಳಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.

ಯಾವುದೇ ಸಂಘಟನೆಯು ರಾಜಕಾರಣ ಆಗಬಾರದು. ಅದು ಶಕ್ತಿಯಾಗಿ ಬೆಳೆಯಬೇಕಿದೆ ಎಂದ ಅವರು, ನಮಗೆ ಬೆಂಬಲ, ರಕ್ಷಣೆ ನೀಡುವವರು ಚುನಾವಣೆಗೆ ಸ್ಪರ್ಧಿಸಿದಲ್ಲಿ ಅವರ ಪರ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಚನ್ನಗಿರಿಯ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ ದಮನಿತರ ಪರವಾಗಿ ಕೆಲಸ ಮಾಡುತ್ತ ಸಂಘಟನೆಯನ್ನು ಸಕ್ರಿಯವಾಗಿಡಬೇಕು. ಸಂವಿಧಾನಬದ್ಧವಾಗಿ ಎಲ್ಲರಿಗೂ ಸಮಾನ ಹಕ್ಕು, ಅಧಿಕಾರ ಹಂಚಿಕೆ ಆಗಬೇಕು. ಹೋರಾಟದ ಜತೆಜತೆಯಲ್ಲೇ ಮಕ್ಕಳ ಶಿಕ್ಷಣದ ಕಡೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ವೈ.ಸಂಪಂಗಿ ಅವರ ನೇತೃತ್ವದಲ್ಲಿ ಕೆಡಿಎಚ್‌ಎ ಸಮಿತಿ ಕಳೆದ 25 ವರ್ಷದಿಂದ ಎಲ್ಲ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತ ಬಂದಿದೆ. ಬಡವರು, ಧ್ವನಿ ಇಲ್ಲದವರಲ್ಲಿ ಆರ್ಥಿಕ, ಸಾಮಾಜಿಕ ಜಾಗೃತಿ ಮೂಡಿಸುತ್ತ ಬಂದಿದೆ ಎಂದು ಹೇಳಿದರು.

ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಬಿ.ಡಿ. ಗುರುಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾಗಿ ಫಾಲಾಕ್ಷ, ಎಚ್.ಬಿ.ಸುಮಂತ್, ಸುರೇಂದ್ರಾಚಾರ್, ಉಪಾಧ್ಯಕ್ಷರಾಗಿ ಎನ್.ವಿ. ಹರೀಶ್‌ಕುಮಾರ್ ಹಾಗೂ ಇತರರು ಅಧಿಕಾರ ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಮುಖಂಡ ಚಂದ್ರಶೇಖರ ಪೂಜಾರ್, ಧನಂಜಯ ಕಡ್ಲೇಬಾಳ್, ನರಸಿಂಹಮೂರ್ತಿ, ಗುರುಮೂರ್ತಿ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net