

ಡಿ.ಎಂ.ಮಹೇಶ್, ದಾವಣಗೆರೆ:
ವಿಶ್ವವಿಖ್ಯಾತ ಮೈಸೂರು ದಸರಾ ಶೋಭಾಯಾತ್ರೆಯಲ್ಲಿ ದಾವಣಗೆರೆ ಜಿಲ್ಲೆಯಿಂದ ಈ ಬಾರಿ ‘ನಾವು ಮನುಜರು’ ಶೀರ್ಷಿಕೆಯ ಸ್ತಬ್ಧಚಿತ್ರ ಪ್ರದರ್ಶನ ಕಾಣಲಿದೆ. ಬೆಣ್ಣೆದೋಸೆ ನಗರಿಯ ಈ ವಿಶೇಷ ದೃಶ್ಯಾವಳಿ ನಾಡಹಬ್ಬದ ಮೆರವಣಿಗೆಯ ನೋಡುಗರ ಕಣ್ಣಿಗೆ ಹಬ್ಬ ನೀಡಲಿದೆ.
ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದಂತೆ, ‘ನಾವು ಮನುಜರು’ ಶೀರ್ಷಿಕೆಯಡಿ ಚಟುವಟಿಕೆ ಆಧಾರಿತ ಕಲಿಕೆ ಎಲ್ಲ ಶಾಲೆಗಳಲ್ಲೂ ಅನುಷ್ಠಾನಗೊಂಡಿದೆ. ಮಕ್ಕಳಲ್ಲಿ ಸಾಮಾಜಿಕ ಸಾಮರಸ್ಯ ಬಿತ್ತುವುದು ಇದರ ಉದ್ದೇಶವಾಗಿದೆ. ನಮ್ಮ ಜಿಲ್ಲೆಯ ಸ್ತಬ್ಧಚಿತ್ರದ ಚಿತ್ರಣ ಕೂಡ ಇದೇ ಪರಿಕಲ್ಪನೆಯ ಜಾಡಿನಲ್ಲೇ ತಯಾರಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಜಿಲ್ಲೆಯ ಪ್ರಾತಿನಿಧಿಕ ಪ್ರೇಕ್ಷಣೀಯ ಸ್ಥಳಗಳಾದ ಸಂತೆಬೆನ್ನೂರು ಪುಷ್ಕರಣಿ, ಹರಿಹರದ ಪುರಾತನ ಹರಿಹರೇಶ್ವರ ದೇಗುಲ ಮೊದಲಾದವು ಸ್ತಬ್ಧಚಿತ್ರಗಳ ರೂಪದಲ್ಲಿ ಸಾದರಗೊಂಡಿದ್ದವು. ಈ ಬಾರಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ನೇತೃತ್ವದಲ್ಲಿ, ಕೋಮು ಸೌಹಾರ್ದ ಪರಿಕಲ್ಪನೆಯಡಿ ಈ ದೃಶ್ಯರೂಪಕ ನಿರ್ಮಿತವಾಗುತ್ತಿದೆ.
ಸಾಮಾಜಿಕ ಸಾಮರಸ್ಯ ಸಾರುವ ಸ್ಥಬ್ಧ್ದಚಿತ್ರದಲ್ಲಿ ಮೂರು ವಿಭಾಗಗಳಿವೆ. ಆರಂಭದಲ್ಲಿ ದೇಶದ ಮಹನೀಯರ ಪ್ರತಿಮೆಗಳು ಎಲ್ಲರನ್ನೂ ಸ್ವಾಗತಿಸಲಿವೆ. ಭಾರತ ಸ್ವಾತಂತ್ರೃದ ನೇತಾರ ಮಹಾತ್ಮ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಆದಿಕವಿ ಪಂಪ, ಶಾಂತಿಯ ಸಂದೇಶ ಸಾರಿದ ಮಹಾತ್ಮ ಬುದ್ಧ, ಸಮಾನತೆ ಬೋಧಿಸಿದ 12ನೇ ಶತಮಾನದ ಬಸವಣ್ಣನವರ ಪ್ರತಿಮೆಗಳು ಹಾಗೂ ಸಾಮರಸ್ಯ ಸ್ಥಾಪನೆಗೆ ಅವರು ನೀಡಿದ ಬೋಧನೆಗಳು, ವಚನಗಳು ಹಾಗೂ ಸಂವಿಧಾನದ ಪೀಠಿಕೆ ಒಕ್ಕಣೆಯ ಫಲಕ ಇಲ್ಲಿ ಮೂಡುತ್ತಿದೆ.
ಎರಡನೇ ಹಂತದಲ್ಲಿ ಬೇರೆ ಬೇರೆ ಕುಲಕುಸುಬುದಾರನ್ನು ಚಿತ್ರಿಸುವ ಮೂಲಕ ವೃತ್ತಿ ಬೇರಾದರೂ ನಾವೆಲ್ಲರೂ ಮನುಜರು ಎಂಬ ಭೂಮಿಕೆಯನ್ನು ಬಿತ್ತಲಿದೆ. ಕುಂಬಾರ, ಚಮ್ಮಾರ, ಮಡಿವಾಳ ಹೀಗೆ ಐವರು ವೃತ್ತಿಪರರನ್ನು ಒಂದೇ ದೊಡ್ಡ ಛತ್ರಿಯ ಸೂರಿನಡಿ ರೂಪಿಸಲಾಗುತ್ತಿದೆ.
ಮೂರನೇ ಹಂತದಲ್ಲಿ ರಾಷ್ಟ್ರಕವಿ ಕುವೆಂಪು ಹೇಳಿದ ಮನುಜಮತ, ವಿಶ್ವಪಥದ ಕಲ್ಪನೆ ಇದೆ. ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ ಮತ್ತು ಭ್ರಾತೃತ್ವವನ್ನು ಸಾರಲಿದೆ. ವಿವಿಧ ಜನಾಂಗದವರು ಆಯಾ ಪ್ರಾದೇಶಿಕ ಉಡುಪು, ಸಂಸ್ಕೃತಿಯನ್ನು ಪ್ರದರ್ಶಿಸುವ ಎಂಟು ಬಗೆಯ ಸಾಂಕೇತಿಕ ಮೂರ್ತಿಗಳಿವೆ. ಮಾನವ ಸರಪಳಿ ಮೂಲಕ ಒಟ್ಟುಗೂಡಿದ ಈ ಜನರು ಭಾರತೀಯರಾದ ನಾವೆಲ್ಲ ಒಂದು ಎಂಬುದನ್ನು ಸಾರಲಿದೆ. ಇದರ ಹಿಂದೆ ಕರ್ನಾಟಕದ ಭೂಪಟ, ಭುವನೇಶ್ವರಿ ಮೂರ್ತಿ ಬೆಂಗಾವಲಾಗಿದೆ.
ಖ್ಯಾತ ಚಲನಚಿತ್ರ ನಿರ್ದೇಶಕ, ಕಲಾವಿದ ಬಿ.ಎಸ್. ಲಿಂಗದೇವರು ನೇತೃತ್ವದ 10 ಮಂದಿ ಕಲಾವಿದರು ಈ ಪರಿಕಲ್ಪನೆಗೆ ಮೂರ್ತರೂಪ ನೀಡುತ್ತಿದ್ದಾರೆ. ಕಳೆದ 10 ದಿನದಿಂದ ಇದಕ್ಕೆ ಭರಪೂರ ತಯಾರಿ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ, ಲಿಂಕ್ ಡ್ಯಾಕುಮೆಂಟ್‌ನಡಿ ಅಂದಾಜು 12 ಲಕ್ಷ ರೂ. ವೆಚ್ಚದಲ್ಲಿ ಅಣಿಯಾಗುತ್ತಿರುವ ಸ್ತಬ್ಧಚಿತ್ರ ಅ. 12ರಂದು ಮೈಸೂರಿನಲ್ಲಿ ಮಾತಾಡಲಿದೆ!
-----
ಸಂವಿಧಾನದಲ್ಲಿ ಹೇಳಲಾದ ಕೋಮುಸೌಹಾರ್ದ ಮತ್ತು ಜಾತ್ಯತೀತ ಸಂದೇಶವನ್ನು ಹೊತ್ತ ಸ್ತಬ್ಧಚಿತ್ರವನ್ನು ದಾವಣಗೆರೆ ಜಿಲ್ಲಾ ಪಂಚಾಯಿತಿಯಿಂದ ಈ ಬಾರಿಯ ಮೈಸೂರು ದಸರಾದಲ್ಲಿ ಪ್ರದರ್ಶಿಸಲಾಗುತ್ತಿದೆ. ಏನಾದರೂ ಆಗು ಮೊದಲು ಮಾನವನಾಗು ಎಂಬ ತ್ವದಡಿ ಧರ್ಮಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕು ಎಂಬುದನ್ನು ಇದು ಹೇಳಲಿದೆ.
ಸುರೇಶ್ ಬಿ. ಇಟ್ನಾಳ್
ದಾವಣಗೆರೆ ಜಿಪಂ ಸಿಇಒ.
--
ಹಿಂದಿನ ವರ್ಷಗಳಲ್ಲಿ ಪ್ರದರ್ಶಿಸಿದ ಪ್ರೇಕ್ಷಣೀಯ ಸ್ಥಳಗಳ ಬದಲಾಗಿ ಇನೋವೇಟಿವ್ ಆಗಿ ಚಿಂತನೆ ಮಾಡಿ ‘ನಾವು ಮನುಜರು‘ ಎಂಬ ಪರಿಕಲ್ಪನೆಯ ಸ್ತಬ್ಧಚಿತ್ರ ತಯಾರಾಗುತ್ತಿದೆ. ಹಿಂದಿನ ಬಾರಿ ಜಿಲ್ಲೆಯಿಂದ ಪ್ರದರ್ಶಿಸಿದ್ದ ಸೂರಗೊಂಡನಕೊಪ್ಪದ ಮಾದರಿಗೆ ಮೆಚ್ಚುಗೆ ಬಹುಮಾನ ಸಂದಿತ್ತು.
ಶಿವಲಿಂಗಪ್ಪ ಕುಂಬಾರ
ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ.