

ದಾವಣಗೆರೆ: ನ್ಯಾಮತಿ ತಾಲೂಕಿನ ಗೋವಿನಕೋವಿ ಹಾಲಸ್ವಾಮೀಜಿ ಮಠದ ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಶ್ರೀಗಳು ಲೋಕ ಕಲ್ಯಾಣಾರ್ಥವಾಗಿ ನ.1 ರಿಂದ 21 ದಿನಗಳ ಮಹಾಪೂಜಾ ಮೌನಾನುಷ್ಠಾನ ಕೈಗೊಳ್ಳಲಿದ್ದಾರೆ ಎಂದು ಹಾಲಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಎಚ್. ಪಾಲಾಕ್ಷಪ್ಪಗೌಡ ತಿಳಿಸಿದರು.
ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀಮಠದ ಹಿಂದಿನ ಗುರುಗಳು ಮೌನಾನುಷ್ಠಾನ ಪೂಜೆ ಕೈಗೊಳ್ಳುವ ಮೂಲಕ ಮಠಕ್ಕೆ ಬಂದಂತಹ ಭಕ್ತರ ಕಷ್ಟ ಕಾರ್ಪಣ್ಯ ಪರಿಹರಿಸುತ್ತಿದ್ದರು. ಅದರಂತೆ ಪ್ರಸ್ತುತ ಪೀಠಾಧ್ಯಕ್ಷರು ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನವೆಂಬರ್ 1 ರಂದು ಹೊನ್ನಾಳಿ ಚನ್ನಪ್ಪ ಸ್ವಾಮೀಜಿ, ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಜಪ ತಪದ ಜತೆಗೆ ಮಹಾ ಪೂಜಾ ಮೌನಾನುಷ್ಠಾನ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಯೋಗಿ ವಿಶ್ವಾರಾಧ್ಯ ಶಿವಾಚಾರ್ಯ ಮಹಾಲಿಂಗ ಹಾಲಶ್ರೀ ಮಾತನಾಡಿ, ಸ್ಥಿರ ಚರ ಪಟ್ಟಾಧಿಕಾರವಾಗಿ ವರ್ಷ ಪೂರೈಸುವುದರೊಳಗೆ ಚನ್ನಪ್ಪ ಶ್ರೀ, ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶ್ರೀ, ವೀರಾಪುರ ಹಿರೇಮಠದ ಪಂಡಿತಾರಾಧ್ಯ ಶ್ರೀ, ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶ್ರೀಗಳ ಸೂಚನೆಯಂತೆ ಲೋಕ ಕಲ್ಯಾಣಾರ್ಥ ಹಾಗೂ ಭಕ್ತರ, ಸಮೃದ್ಧ ರಾಷ್ಟ್ರ ನಿರ್ಮಾಣ ಉದ್ದೇಶ ಸಂಕಲ್ಪದೊಂದಿಗೆ 21 ದಿನಗಳ ಕಾಲ ಜಪ ತಪ, ಮಹಾ ಪೂಜಾ ಮೌನಾನುಷ್ಠಾನ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು.
ಬೇಡಜಂಗಮ ಸೇವಾ ಸಮಿತಿ ಹೊನ್ನಾಳಿ ತಾಲೂಕು ಅಧ್ಯಕ್ಷ ಬೈರನಹಳ್ಳಿ ಎಂ. ಪಂಚಾಕ್ಷರಯ್ಯ ಮಾತನಾಡಿ, ಮೌನಾನುಷ್ಠಾನದ ಶುಭ ಸಂದರ್ಭದಲ್ಲಿ ಬೇಡಜಂಗಮ ವಟುಗಳ ಹಾಗೂ ಆಸಕ್ತಿಯುಳ್ಳ ಭಕ್ತರಿಗೆ ನ.14 ರಂದು ಶಿವದೀಕ್ಷಾ ಕಾರ್ಯಕ್ರಮ, ನ. 22 ರಂದು ಶಾಂತಿ ಹೋಮ, ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳ ಮೂಲಕ ಮೌನಾನುಷ್ಠಾನದ ಮಂಗಲ ನಡೆಯಲಿದೆ ಎಂದರು.
ನ. 23ರಂದು ಬೆಳಗ್ಗೆ ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸರ್ವಧರ್ಮ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಎಸ್.ಇ. ರಮೇಶ್, ಕಾರ್ಯದರ್ಶಿ ವಿ.ಎಚ್. ರುದ್ರೇಶ್, ಪದಾಧಿಕಾರಿಗಳಾದ ಗಂಗಾಧರಪ್ಪ, ಬಿ. ರಾಜಪ್ಪ, ಸತೀಶ್, ಶಿವಮೂರ್ತಪ್ಪ, ಮಧು, ವೀರೇಂದ್ರಸ್ವಾಮಿ, ವಿಶ್ವನಾಥ್, ಚನ್ನೇಶಯ್ಯ, ಪತ್ರಕರ್ತರಾದ ಸದಾಶಿವಯ್ಯ ಹಿರೇಮಠ್, ಎಂ.ಎಸ್. ಶಾಸ್ತ್ರಿ ಹೊಳೆಮಠ್, ಬೇಡಜಂಗಮ ಸೇವಾ ಸಮಿತಿಯ ಕುಳಗಟ್ಟೆ ರುದ್ರಸ್ವಾಮಿ, ಬೆನಕನಹಳ್ಳಿ ಬಸವರಾಜಯ್ಯ, ಕ್ಯಾಸಿನಕೆರೆ ರುದ್ರೇಶ್, ನ್ಯಾಮತಿ ತಾಲೂಕು ಅಧ್ಯಕ್ಷ ಚಟ್ನಹಳ್ಳಿ ರೇವಣಸಿದ್ದಯ್ಯ ಇದ್ದರು.