ಧರ್ಮ ಪ್ರಚಾರದಲ್ಲಿ ಮೊದಲಿಗರು ಸದ್ಯೋಜಾತ ಶ್ರೀ

1000735166.jpg
Published on

ದಾವಣಗೆರೆ: ವಿಶ್ವದಾದ್ಯಂತ ವೀರಶೈವ ಧರ್ಮ ಪ್ರಚಾರ ಮಾಡಿದ ಹಾಗೂ ಇದಕ್ಕಾಗಿ ದೇಶದ ಗಡಿ ದಾಟಿದ ಮಠಾಧೀಶರಲ್ಲಿ ಸದ್ಯೋಜಾತ ಸ್ವಾಮೀಜಿ ಮೊದಲಿಗರು ಎಂದು ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಹೇಳಿದರು.

ನಗರದ ಸದ್ಯೋಜಾತ ಮಠದಲ್ಲಿ ಹಿರೇಮಠದ ಸ್ಥಿರಪಟ್ಟಾಧ್ಯಕ್ಷ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರ 17ನೇ ಸಂಸ್ಮರಣೋತ್ಸವದಲ್ಲಿ ಮಾತನಾಡಿದರು.

ವೀರಶೈವ ಧರ್ಮದ ಗುರು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಜತೆಗೆ ವೀರಶೈವ ಲಿಂಗಾಯತ ತತ್ವಗಳಿಗೆ ವಿಶ್ವ ಮನ್ನಣೆ ದೊರಕಿಸಲು ಸ್ವಾಮೀಜಿ ಕಾರಣರಾದರು ಎಂದು ಸ್ಮರಿಸಿದರು.

ವೀರಶೈವ ಲಿಂಗಾಯತ ಧರ್ಮದ ಆಚರಣೆಗಳು ಜನರಿಗೆ ತಲುಪುತ್ತಿಲ್ಲ ಎಂಬ ಕೊರಗನ್ನು ಸದ್ಯೋಜಾತ ಸ್ವಾಮೀಜಿ ಹೊಂದಿದ್ದರು. ದುಡಿಮೆಯ ಹಣದಲ್ಲಿ ಮಠ ಕಟ್ಟಿದರು. ಅಲ್ಲಿನ ಕಸ ಗುಡಿಸುತ್ತ, ಅಡುಗೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಶಿವಾಚಾರ್ಯ ಪರಂಪರೆಯ ಮಠಾಧೀಶರಿಗೆ ಈ ಮಠ ತವರು ಮನೆಯಾಗಿತ್ತು ಎಂದು ಹೇಳಿದರು.

ಭಕ್ತರೊಬ್ಬರು ಉಡುಗೊರೆಯಾಗಿ ಕಾರು ನೀಡಲು ಮುಂದಾದಾಗ ತಿರಸ್ಕರಿಸಿದ್ದ ಸ್ವಾಮೀಜಿ, ನಿಸ್ವಾರ್ಥ ಸೇವೆ, ಧರ್ಮದ ಮೇಲಿನ ನಂಬಿಕೆ ಹಾಗೂ ಬಡವರ ಬಗ್ಗೆ ಪ್ರೀತಿ ಹೊಂದಿದ್ದರು. ಸಮಯ ಪರಿಪಾಲಕರಾಗಿದ್ದರು. ಸದ್ಯೋಜಾತ ಸ್ವಾಮೀಜಿ ಬಗ್ಗೆ ಪಂಚಪೀಠಾಧೀಶರಲ್ಲಿ ತಪ್ಪು ಕಲ್ಪನೆ ಇತ್ತು. ಆದರೆ ಅವರ ನಡೆ-ನುಡಿ ಏಕರೂಪವಾಗಿತ್ತು ಎಂದರು.

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಒಗ್ಗೂಡಿ ಧರ್ಮ ಉಳಿಸಬೇಕಿದೆ. ಇಂದಿನ ಯುವ ಪೀಳಿಗೆ ಈ ಧರ್ಮ ಪರಂಪರೆಗೆ ಒಳಪಡಬೇಕಿದೆ. ದುಶ್ಚಟಗಳಿಂದ ದೂರ ಮಾಡಬೇಕಿದೆ ಎಂದು ಆಶಿಸಿದರು.

ರಟ್ಟಿಹಳ್ಳಿಯ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾಯಕ ಅಪ್ಪಗೆರೆ ತಿಮ್ಮರಾಜು ಜನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು. ಉದ್ಯಮಿ ಐ.ಪಿ.ಮಲ್ಲೋಕಾರಾಧ್ಯ, ಸ್ವಾಮಿ ತ್ರಿಭುವನಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net