ನಾಳೆಯಿಂದ ಜನಜಾಗೃತಿ ಧರ್ಮ ಸಮ್ಮೇಳನ  ವಾಗೀಶ ಪಂಡಿತಾರಾಧ್ಯ ಶ್ರೀಗಳ ಸ್ಮರಣೋತ್ಸವ

1000479171.jpg
Published on

ದಾವಣಗೆರೆ: ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 38ನೇ ವರ್ಷದ ಸ್ಮರಣೋತ್ಸವ ಮತ್ತು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 13ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಸದ್ಯೋಜಾತ ನಿಕೇತನ ಮಠದಲ್ಲಿ ನ. 4ರಿಂದ ಮೂರು ದಿನಗಳ ಕಾಲ ಜನಜಾಗೃತಿ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ನಿತ್ಯ ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.
ನ. 4ರ ಕಾರ್ಯಕ್ರಮದಲ್ಲಿ ರಾಮಘಟ್ಟದ ಶ್ರೀ ರೇವಣಸಿದ್ಧ ಸ್ವಾಮೀಜಿ ಅಧ್ಯಕ್ಷತೆಯಲ್ಲಿ, ಮುಷ್ಟೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಲೆಕ್ಕಪರಿಶೋಧಕ ಡಾ. ಎಸ್. ಅಥಣಿ ವೀರಣ್ಣ, ಶಾಸಕ ಬಿ.ಪಿ ಹರೀಶ್, ಮಾಜಿ ಶಾಸಕ ಎಚ್.ಎಸ್.  ಶಿವಶಂಕರ್, ಜಿಲ್ಲಾಧಿಕಾರಿ ಜಿ.ಎಂ ಗಂಗಾಧರ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಪಾಲಿಕೆ ಸದಸ್ಯ ಎ. ನಾಗರಾಜ್ ಪಾಲ್ಗೊಳ್ಳುವರು.
 ವೀರಶೈವ ಧರ್ಮವನ್ನು ಪೋಷಿಸಿದ ರಾಜ ಮನೆತನಗಳು ವಿಷಯ ಕುರಿತು ಬೆಳಗಾವಿಯ ವಿಶ್ರಾಂತ ಪ್ರಾಧ್ಯಾಪಕ ಸಿ.ಜಿ. ಮಠಪತಿ ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಬಾ.ಮಾ.ಬಸವರಾಜಯ್ಯ ಅವರಿಗೆ ಡಾ. ಲಲಿತಮ್ಮ ಚಂದ್ರಶೇಖರ್ ಹೆಸರಿನಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ನ.5ರಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ ಸಿದ್ದೇಶ್ವರ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆರೋಗ್ಯ ಮತ್ತು ಆಧ್ಯಾತ್ಮದ ಬಗ್ಗೆ ವಿಜಯಲಕ್ಷ್ಮಿ ಬಾಳೆಕುಂದ್ರಿ ಉಪನ್ಯಾಸ ನೀಡಲಿದ್ದಾರೆ.
ನ. 6 ರ ಕಾರ್ಯಕ್ರಮದಲ್ಲಿ ತೊಗರ್ಸಿಯ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬಸವನ ಬಾಗೇವಾಡಿಯ ಡಾ. ಒಡೆಯರ್ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದು,  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾಜ ಮತ್ತು ಪಂಚಪೀಠಗಳ ಮಹತ್ವದ ಕುರಿತು ಮಠದ ವೀರಭದ್ರಯ್ಯ  ಉಪನ್ಯಾಸ ನೀಡಲಿದ್ದಾರೆ.
ಅಂದು ಬೆಳಿಗ್ಗೆ 8 ಗಂಟೆಗೆ ನಗರದ ದಾವಣಗೆರೆ ಹರಿಹರ ಅರ್ಬನ್ ಸಹಕಾರಿ ಸಮುದಾಯ ಭವನದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಹೂವಿನ ಅಲಂಕಾರ ಮತ್ತು ದೀಕ್ಷಾ ಕಾರ್ಯಕ್ರಮ ನಡೆಯಲಿದ್ದು, ನಂತರ ನಗರದ ಪ್ರಮುಖ ಬೀದಿಗಳಲ್ಲಿ ಉಭಯ ಜಗದ್ಗುರುಗಳ ರಜತ ಮೂರ್ತಿಗಳ ಮೆರವಣಿಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net