

ದಾವಣಗೆರೆ: ಚನ್ನಗಿರಿ ಘಟನೆ ಸಂಬಂಧ ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ವೃತ ನಿರೀಕ್ಷಕ ಬಿ. ನಿರಂಜನ್ ಹಾಗೂ ಎಸ್‌ಐ ಅಕ್ತರ್ ಅವರನ್ನು ಅಮಾನತುಗೊಳಿಸಿದ ಆದೇಶ ಹಿಂಪಡೆಯಬೇಕು ಎಂದು ಕರ್ನಾಟಕ ಪೊಲೀಸ್ ಕುಟುಂಬಗಳ ಕಲ್ಯಾಣ ಸಂಘದ ಅಧ್ಯಕ್ಷ ಗುರುಪಾದಯ್ಯ ಮಠದ್ ಒತ್ತಾಯಿಸಿದರು.
ಮಟಕಾ ಆರೋಪಿ ಆದಿಲ್ ವಿಚಾರಣೆ ಹಂತದಲ್ಲೇ ಮೃತಪಟ್ಟಿದ್ದಾನೆ. ಕಾನೂನು ಪರಿಪಾಲಿಸುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಬೇಕಾದ ಸರ್ಕಾರ, ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಇದರಿಂದ ಅವರ ಕರ್ತವ್ಯ ನಿರ್ವಹಣೆ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಸಮಾಜಘಾತುಕ ಶಕ್ತಿಗಳು, ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿ ಆದಿಲ್ ಠಾಣೆಗೆ ಬಂದ ಅತ್ಯಲ್ಪ ಸಮಯದಲ್ಲೇ ಅಸು ನೀಗಿದ್ದ. ಶವದೊಂದಿಗೆ ಠಾಣೆ ಎದುರು ಪ್ರತಿಭಟನೆ ನಡೆಸುವ ವೇಳೆ ಉದ್ರಿಕ್ತರು ಠಾಣೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ವಾಹನಗಳನ್ನು ಜಖಂಗೊಳಿಸಿದ್ದರು. ಹನ್ನೊಂದು ಸಿಬ್ಬಂದಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪೊಲೀಸರು ತಪ್ಪು ಮಾಡಿದ್ದಲ್ಲಿ ಕಾನೂನು ಮತ್ತು ಸಂವಿಧಾನದಡಿ ಕ್ರಮ ಕೈಗೊಳ್ಳಲು ಅವಕಾಶಗಳಿವೆ. ಆದರೆ ಕಾನೂನು ಕೈಗೆ ತೆಗೆದುಕೊಂಡ ಕ್ರಮ ಸರಿಯಲ್ಲ ಎಂದರು.
ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಲ್ಲಿನ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿನಯ್ ಎಂ. ವಗ್ಗರ್, ಧನಂಜಯ್, ಹನುಮಂತಪ್ಪ ಸೊರಟೂರು, ಆರುಂಡಿ ನಾಗರಾಜ್ ಇದ್ದರು.