ವಾರ್ಡ್‌ವಾರು ರೋಗಿಗಳ ಸಮೀಕ್ಷೆಗೆ ಕೈಜೋಡಿಸಿ  ಸಂಸದೆ ಪ್ರಭಾ ಮನವಿ

1000527805.jpg
Published on

ದಾವಣಗೆರೆ: ನಗರದ ವಿವಿಧ ವಾರ್ಡ್‌ವಾರು ಬಿಪಿ, ಮಧುಮೇಹ, ಕ್ಷಯ, ಕ್ಯಾನ್ಸರ್ ರೋಗ ಲಕ್ಷಣವುಳ್ಳ ಜನರ ಸರ್ವೇ ನಡೆಸಲಾಗುತ್ತಿದ್ದು ಆಶಾ ಕಾರ್ಯಕರ್ತೆಯರು ಕೈ ಜೋಡಿಸಬೇಕು ಎಂದು ಸಂಸದೆ, ಎಸ್ಸೆಸ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಎಸ್ಸೆಸ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಜಾದ್ ನಗರದಲ್ಲಿ 5 ಸಾವಿರ ಜನರ ಸಮೀಕ್ಷೆ ನಡೆಸಲಾಗಿದೆ. ಉಳಿದೆಡೆ ಸರ್ವೇ ನಡೆಯಬೇಕಿದೆ. ಆರೋಗ್ಯ ಸಬಲೀಕರಣ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಯಾವೊಬ್ಬ ರೋಗಿಗಳೂ ಇದರಿಂದ ಹೊರಗುಳಿಯಬಾರದು. ರೋಗ ಲಕ್ಷಣ ಇಲ್ಲದವರನ್ನೂ ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರೇ ಈ ಕಾರ್ಯಕ್ರಮದ ಬೆನ್ನೆಲುಬು. ಹೀಗಾಗಿ ಶನಿವಾರ (2ನೇ ಶನಿವಾರ ಬಿಟ್ಟು)ಗಳಂದು ಸರ್ವೇ ಮಾಡಬೇಕು. ಕ್ಯಾನ್ಸರ್ ಇತರೆ ರೋಗ ಲಕ್ಷ್ಷಣವಿದ್ದವರಿಗೆ ಕೌನ್ಸೆಲಿಂಗ್ ಸಹಿತ ಸರ್ಕಾರಿ ಆಸ್ಪತ್ರೆ ಅಲ್ಲದೆ ಬಾಪೂಜಿ, ಎಸ್ಸೆಸ್ ಹಾಗೂ ವಿಶ್ವಾರಾಧ್ಯ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆಗಳನ್ನು ಕಲ್ಪಿಸಬಹುದು ಎಂದರು.
ಸ್ತನ, ಗರ್ಭಕೋಶದ ಕ್ಯಾನ್ಸರ್ ಲಕ್ಷಣವುಳ್ಳ ಮಹಿಳೆಯರನ್ನು ಗುರುತಿಸಬೇಕು. ಭಯ ಪಡಿಸದೇ, ಮನವರಿಕೆ ಮಾಡಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು. ಮೂರು, ನಾಲ್ಕನೇ ಹಂತಕ್ಕೆ ತಲುಪಿದರೆ ಸಾವಿನ ಪ್ರಮಾಣ ಹೆಚ್ಚಬಹುದು. ಆರಂಭಿಕ ಹಂತದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿದಲ್ಲಿ ಜನರ ಆರ್ಥಿಕ ಹೊರೆ ತಗ್ಗಲಿದೆ. ನಗರದ ಆರೋಗ್ಯವೂ ಸುಧಾರಿಸಲಿದೆ ಎಂದು ತಿಳಿಸಿದರು.
ನಗರ ಪ್ರದೇಶದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು,ಆಶಾ ಕಾರ್ಯಕರ್ತೆಯರ ಕೊರತೆ ಇರುವ ಹಿನ್ನೆಲೆಯಲ್ಲಿ ಸರ್ವೇಗೆ ಬಾಪೂಜಿ ಸಂಸ್ಥೆಯ ಶುಶ್ರೂಷಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಪಂದನ ಯೋಜನೆಯಡಿ ಎಸ್‌ಎಸ್ ಕೇರ್ ಟ್ರಸ್ಟ್‌ನಡಿ 3 ಸಾವಿರಕ್ಕೂ ಹೆಚ್ಚು ಮಹಿಳೆಯರಲ್ಲಿ ಕ್ಯಾನ್ಸರ್ ತಪಾಸಣೆ ನಡೆಸಲಾಗಿದೆ. ಎಸ್ಸೆಸ್ ಆಸ್ಪತ್ರೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ನಿತ್ಯ ಮಧ್ಯಾಹ್ನ 2 ಗಂಟೆಯವರೆಗೆ ಕ್ಯಾನ್ಸರ್‌ನ ಉಚಿತ ತಪಾಸಣೆ ನಡೆಸಲಾಗುವುದು ಎಂದರು.
ಎಸ್ಸೆಸ್ ಕೇರ್ ಟ್ರಸ್ಟ್ ಗ್ರಾಮೀಣ ಶಿಬಿರಗಳನ್ನು ನಡೆಸುತ್ತಿದೆ. ಶಾಮನೂರು ಶಿವಶಂಕರಪ್ಪ ಆಸ್ಪತ್ರೆಯಲ್ಲಿ 16 ಡಯಾಲಿಸಿಸ್ ಯಂತ್ರಗಳ ಮೂಲಕ ಇದುವರೆಗೆ 20 ಸಾವಿರ ಜನರಿಗೆ ಉಚಿತ ಡಯಾಲಿಸಿಸ್ ಸೇವೆ ಒದಗಿಸಲಾಗಿದೆ. ನಮ್ಮ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಮೆಮೊಗ್ರಫಿ, ಬಯಾಪ್ಸಿ, ಪಾಪ್ ಸ್ಮಿಯರ್ ಮೊದಲಾದ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಮಾತನಾಡಿ 2019ರ ವೇಳೆಗೆ ದೇಶದಲ್ಲಿ ಅಸಾಂಕ್ರಾಮಿಕ ರೋಗಿಗಳ ಪೈಕಿ ಶೇ. 65ರಷ್ಟು ಜನರು ಮೃತಪಟ್ಟಿದ್ದರು. 2022 ವೇಳೆಗೆ ಇದು ಶೇ.70ಕ್ಕೆ ತಲುಪಿತು. ಇದನ್ನು ಹಂತ ಹಂತವಾಗಿ ತಗ್ಗಿಸುವ ಹಿನ್ನೆಲೆಯಲ್ಲಿ ಸರ್ಕಾರ, ಶಿಕ್ಷಣ ಹಾಗೂ ಸಮುದಾಯದ ಅರಿವು ನೀಡುತ್ತಿದೆ. ಎಚ್‌ಐವಿ ಹೊರತಾಗಿ ಉಳಿದೆಲ್ಲ ರೋಗ ನಿಯಂತ್ರಣ ಮಾಡಬಹುದು ಎಂದರು.
ಡಿಸೆಂಬರ್ ಅಂತ್ಯದೊಳಗಾಗಿ ನಗರ ಪ್ರದೇಶದಲ್ಲಿ ಸರ್ವೇ ಕಾರ್ಯ ಮುಗಿಸುವ ಇರಾದೆ ಇದೆ. ಇದು ಸೂಕ್ಷ್ಮ ಸಮೀಕ್ಷೆ ಆದ್ದರಿಂದ ಆಶಾ ಕಾರ್ಯಕರ್ತೆಯರು ಗಮನ ಹರಿಸಬೇಕು ಎಂದರು.
ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ನಂದೀಶ್ವರ ಮಾತನಾಡಿ ನಾನೂ ಸಹ ಕ್ಯಾನ್ಸರ್‌ಗೆ ಒಳಗಾಗಿ ಈಗ ಚೇತರಿಸಿಕೊಳ್ಳುತ್ತಿದ್ದೇನೆ. ಆರಂಭಿಕ ಚಿಕಿತ್ಸೆ ಪಡೆಯುವುದು ಮುಖ್ಯ. ಇದರೊಂದಿಗೆ ಆರೋಗ್ಯ ವಿಮೆಯ ಲಾಭ ಪಡೆಯುವ ಬಗ್ಗೆಯೂ ಜ್ಞಾನ ಇರಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ. ಷಣ್ಮುಖಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ದೇವರಾಜ್, ಜೆಜೆಎಂ ಕಾಲೇಜಿನ ಪ್ರಾಚಾರ್ಯೆ ಡಾ. ಶುಕ್ಲಾಶೆಟ್ಟಿ, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸೋಮಶೇಖರ್, ಡಾ. ಲತಾ, ಡಾ. ಅನುರೂಪಾ, ಡಾ. ಶುಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net