

ದಾವಣಗೆರೆ: ಸರ್ಕಾರದ ಸುತ್ತೋಲೆಯನ್ವಯ ಬರಪೀಡಿತ ದಾವಣಗೆರೆ ಜಿಲ್ಲೆಯಲ್ಲಿ ಒಂದರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಏ. 11ರಿಂದ ಮೇ 28ರವರೆಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಹಾಗೂ ಅಕ್ಷರದಾಸೋಹ ಕಾರ್ಯಕ್ರಮದಡಿ 31 ಬರ ಘೋಷಿತ ಜಿಲ್ಲೆಗಳಲ್ಲಿ ಬೇಸಿಗೆ ರಜಾವಧಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸರ್ಕಾರದ ಸೂಚನೆ ಇದೆ. ಅದರಂತೆ ಭಾನುವಾರಗಳಂದು ಹೊರತುಪಡಿಸಿ ನಿರಂತರ 41 ದಿನಗಳ ಕಾಲ ಇದನ್ನು ನಡೆಸಲು ಸಿದ್ಧತೆ ನಡೆಸುವಂತೆ ತಿಳಿಸಿದರು.
ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳು ಸೇರಿ ಈಗಷ್ಟೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 12 ರಿಂದ 2 ಗಂಟೆಯ ಅವಧಿಯಲ್ಲಿ ಊಟ ನೀಡಲಾಗುತ್ತದೆ. ಗ್ರಾಮ, ಕೇಂದ್ರಸ್ಥಾನದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ, ಹೆಚ್ಚು ಮಕ್ಕಳಿರುವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅಲ್ಲಿಗೆ ಇತರೆ ಶಾಲೆ ಮಕ್ಕಳು ಬಂದು ಊಟ ಮಾಡಬಹುದು ಎಂದು ಹೇಳಿದರು.
ಪ್ರತಿ ಎರಡು ಕಿ.ಮೀ ವ್ಯಾಪ್ತಿಯ ಒಳಗೆ ಈ ಕೇಂದ್ರಗಳನ್ನು ಗುರುತಿಸಬೇಕು. ಬಿಸಿಯೂಟ ನಿರ್ವಹಣೆ, ವಿತರಣೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಶಾಲೆ ಮುಖ್ಯ ಶಿಕ್ಷಕರ ಮೇಲಿದೆ. 250 ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ನಿರ್ವಹಣೆಗೆ ಹೆಚ್ಚುವರಿಯಾಗಿ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವ ಜತೆಗೆ ಪಕ್ಕದ ಶಾಲೆಯಲ್ಲಿನ ಅಡುಗೆ ಸಿಬ್ಬಂದಿ ಸೇವೆ ಬಳಸಿಕೊಳ್ಳಬಹುದು ಎಂದು ಸೂಚಿಸಿದರು.
ನಿಗದಿತ ಅವಧಿಯಲ್ಲಿ ಶಾಲೆಗೆ ಬಂದು ಬಿಸಿಯೂಟ ಸೇವಿಸಲು ಆಸಕ್ತ ಮಕ್ಕಳನ್ನು ಕಳುಹಿಸುವ ಸಂಬಂಧ ಪಾಲಕರಿಂದ ಒಪ್ಪಿಗೆ ಪತ್ರ ಸಂಗ್ರಹಿಸಬೇಕು. ಅವರಿಗೆ ಈ ಹಿಂದಿನ ಮೆನುವಿನಂತೆ ಊಟ ವಿತರಿಸಬೇಕು. ಯಾವ ಶಾಲೆಯ ವಿದ್ಯಾರ್ಥಿಗಳಿಗೆ ಯಾವ ಶಾಲಾ ಕೇಂದ್ರಕ್ಕೆ ಟ್ಯಾಗ್ ಮಾಡಲಾಗಿದೆ ಎಂದು ಆಯಾ ಶಾಲಾ ಸೂಚನಾ ಫಲಕದಲ್ಲಿ ಬೇಸಿಗೆ ರಜೆಗೂ ಮೊದಲೇ ಪ್ರಚುರಪಡಿಸಬೇಕೆಂದು ತಿಳಿಸಿದರು.
ಆಯಾ ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು ಬಿಸಿಯೂಟ ಕೇಂದ್ರಗಳಿಗೆ ಶುದ್ಧ್ದ ಕುಡಿವ ನೀರೊದಗಿಸಬೇಕು. ಊಟದಲ್ಲಿ ವ್ಯತ್ಯಾಸ, ಕಲಬೆರಕೆ ಆಗದಂತೆ ಸುರಕ್ಷತಾ ವಿಭಾಗದ ಅಧಿಕಾರಿಗಳು ಆಗಾಗ್ಗೆ ಪರೀಕ್ಷೆ ನಡೆಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಡಯಟ್ ಪ್ರಾಚಾರ್ಯೆ ಗೀತಾ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ದುರುಗಪ್ಪ, ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದರು.