ಶವಗಳಿಗೆ ಮೋಕ್ಷದಾತೆ ಸುಧಾರಾಣಿ ಸ್ಮಶಾನಗಾಥೆ

1001253513_20251024001126407.jpg
Published on

ಡಿ.ಎಂ.ಮಹೇಶ್, ದಾವಣಗೆರೆ:

ನನ್ನ ಕೈಗಳು ಲೆಕ್ಕವಿಲ್ಲದಷ್ಟು ಹೆಣಗಳಿಗೆ ಬೆಂಕಿ ಹಚ್ಚಿವೆ. ಅವುಗಳ ಸಂಖ್ಯೆ ಸರಿಸುಮಾರು ಮೂರು ಸಾವಿರ ದಾಟಿರಬಹುದು. ಅನಾಥ ಶವಗಳಿಗೆಲ್ಲ ವಾರಸುದಾರಳಂತೆ ನಿಂತು ಸಂಸ್ಕಾರ ನಡೆಸಿಕೊಟ್ಟಿದ್ದೇನೆ. ಆನ್‌ಲೈನ್‌ನಲ್ಲಿ ಶುಲ್ಕ ಕಟ್ಟಿ ಹೆತ್ತವರ ಅಂತ್ಯಕ್ರಿಯೆಗೆ ಬಾರದ ಮಕ್ಕಳೂ ಇದ್ದಾರೆ! ನಾನೇ ಅಗ್ನಿಸ್ಪರ್ಶ ಮಾಡಿ, ವಿಡಿಯೋಕಾಲ್‌ನಲ್ಲಿ ತೋರಿಸಿದ್ದೇನೆ. ಇದಕ್ಕಿಂತ ಪುಣ್ಯ ಕಾರ್ಯ ಮತ್ತೇನಿದೆ ಸಾರ್..'

ಇದು ದಾವಣಗೆರೆಯ ವೈಕುಂಠ ಶಾಂತಿಧಾಮದಲ್ಲಿ 10 ವರ್ಷದಿಂದ ಶವಗಳನ್ನು ಸುಡುವ ಕಾಯಕಯೋಗಿ ಸುಧಾರಾಣಿ ಅವರ ಧನ್ಯತಾಭಾವದ ನುಡಿ. ಮೂವತ್ತೈದರ ಹರೆಯದ ಸುಧಾರಾಣಿ, ದಾವಣಗೆರೆ ತಾಲೂಕು ದೊಡ್ಡಮಾಗಡಿ ಗ್ರಾಮದವರು. ಓದಿದ್ದು ದ್ವಿತೀಯ ಪಿಯು. ಆರಂಭದಿಂದಲೇ ಕಷ್ಟಕಾಲ ಎದುರಿಸಿದ್ದರು. ಸಂಸ್ಕೃತ ಬಿಎ ಪದವೀಧರ, ಬೆಂಗಳೂರು ಮೂಲದ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು ವರಿಸಿದರು. ಪೌರೋಹಿತ್ಯ, ದೇವಸ್ಥಾನದಲ್ಲಿ ಅರ್ಚಕರಾಗಿಯೂ ಸ್ವಾಮೀಜಿ ಕೆಲಸ ಮಾಡಿದ್ದರು. ಮಗ ಮಲ್ಲಿಕಾರ್ಜುನ, ಬೆಂಗಳೂರಿನ ಸಿದ್ದಾರೂಢ ಮಠದಲ್ಲಿದ್ದುಕೊಂಡು ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ.

ಆರಂಭದಲ್ಲಿ ಅಡುಗೆ ಕಂಟ್ರಾಕ್ಟರ್ ಮಾಡಿಕೊಂಡಿದ್ದ ಸುಧಾರಾಣಿ, ನಂತರ ದಾವಣಗೆರೆಯ ವೈಕುಂಠಧಾಮದಲ್ಲಿ ಕೆಲಕಾಲ ಮ್ಯಾನೇಜರ್ ಆಗಿದ್ದರು. ಶವ ಸುಡುವ ಕೆಲಸಗಾರ ಕೆಲಸ ಬಿಟ್ಟುಹೋದಾಗ ಅಳುಕಿನಿಂದಲೇ ಇಟ್ಟ ಹೆಜ್ಜೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

ದಾವಣಗೆರೆಯ ವೈಕುಂಠ ಶಾಂತಿಧಾಮದಲ್ಲಿ ಶವ ಸುಡುತ್ತಿರುವ ಸುಧಾರಾಣಿ, ಶವಸಂಸ್ಕಾರದ ಮುಂಗಡ ಬುಕಿಂಗ್ ಮಾಡಿಕೊಂಡು, ಶವ ಸಾಗಣೆ ವಾಹನದಲ್ಲೇ ಮೃತರ ಮನೆಗೆ ತೆರಳುತ್ತಾರೆ. ಮೃತದೇಹ ಎತ್ತಲು ಹೆಗಲು ಕೊಡುತ್ತಾರೆ. ಚಿತಾಗಾರದ ಜಾಗ ಸ್ವಚ್ಛಗೊಳಿಸುತ್ತಾರೆ. ಖುದ್ದು ಕಟ್ಟಿಗೆಗಳನ್ನು ಜೋಡಿಸಿ ಶವವನ್ನು ಸುಡಲು ಅಣಿ ಮಾಡಿಕೊಳ್ಳುತ್ತಾರೆ. ಒಂದೊಂದು ಶವದ ದಹನ ಪ್ರಕ್ರಿಯೆಗೆ ನಾಲ್ಕು ತಾಸು ವ್ಯಯಿಸುತ್ತ ಧನ್ಯತಾ ಭಾವಕ್ಕೆ ಒಳಗಾಗುವ ಪುಣ್ಯವತಿಯಾಗಿದ್ದಾರೆ.

ಯಮುನಾಬಾಯಿ ನಲ್ಲೂರು ಶಾಂತಾರಾಂ ಅವರ ಸ್ಮರಣಾರ್ಥ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಈ ಶಾಂತಿಧಾಮ (ಚಿತಾಗಾರ) ಅತಿ ಕಡಿಮೆ ದರದಲ್ಲಿ ಚಿತೆ ಸುಡುವ ವ್ಯವಸ್ಥೆ ಮಾಡಿಕೊಂಡು ಬರುತ್ತಿದೆ.

ಮ್ಯಾನೇಜ‌ರ್ ಸಿದ್ದರಾಮೇಶ್ವರ ಸ್ವಾಮೀಜಿ, ಶವಸಾಗಣೆ ವಾಹನ ಚಾಲಕ ಚೇತನ್ ಸೇರಿ ಮೂವರು ಇಲ್ಲಿಯೇ ವಾಸಿಸುತ್ತಿದ್ದಾರೆ. ಸುಧಾರಾಣಿ ಅವರ ಸೇವೆಯನ್ನು ಜಿಲ್ಲಾಡಳಿತ, ನಗರಪಾಲಿಕೆ, ಸಂಘ-ಸಂಸ್ಥೆಗಳು ಗುರುತಿಸಿ, ಸ್ವಂತ ಸೂರು ಕಾಣುವ ಈ ಮಸಣದ ಹೂವಿನಾಸೆಗೆ ಸ್ಪಂದಿಸಬೇಕಿದೆ.

.....

ಹೆದರಿಕೊಳ್ಳುತ್ತಲೇ ಶವ ಸುಡುವ ಕೆಲಸಕ್ಕೆ ಸೇರಿದ್ದ ನನ್ನ ಪತ್ನಿಗೆ ಈಗ ಭಯವಿಲ್ಲ. ಶಾಂತಿಧಾಮಕ್ಕೆ ಬರುವ ಮೃತರ ಸಂಬಂಧಿಗಳು ಸುಧಾರಾಣಿಯ ಧೈರ್ಯದ ಮಾತು ಕೇಳಿ ನಗುತ್ತಾ ಹೋಗುತ್ತಾರೆ. ಅವಳ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ.

| ಸಿದ್ದರಾಮೇಶ್ವರ ಸ್ವಾಮೀಜಿ, ಸುಧಾರಾಣಿ ಪತಿ.

...

ತುತ್ತು ಅನ್ನಕ್ಕೂ ಪರದಾಡಿದ್ದ ಕಷ್ಟದ ದಿನಗಳು ಈಗಿಲ್ಲ. ಈ ಶಾಂತಿಧಾಮದಲ್ಲಿ ನಿಜವಾದ ನೆಮ್ಮದಿ ಸಿಕ್ಕಿದೆ. ಶವ ಸುಡುವ ಕೆಲಸ ದೇವಸ್ಥಾನದಷ್ಟೇ ಉತ್ತಮ ಕಾರ್ಯ. ಇದರಿಂದ ನನ್ನ ಜೀವನದಲ್ಲಿ ಬದಲಾವಣೆ ಆಗಿದೆ. ನನ್ನ ಪತಿ ಶಕ್ತಿ ತುಂಬಿದ್ದಾರೆ.

| ಸುಧಾರಾಣಿ, ಶವ ಸುಡುವ ಕಾಯಕಯೋಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net