

ದಾವಣಗೆರೆ: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿದ ತೆರಿಗೆ ವಿರೋಧಿಸಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ಪಕ್ಷದ ಕಾರ್ಯಕರ್ತರು ಮಂಗಳವಾರ, ಜಯದೇವ ವೃತ್ತದಿಂದ ಎಸಿ ಕಚೇರಿಯವರೆಗೆ ಬೈಕುಗಳನ್ನು ತಳ್ಳಿಕೊಂಡು ಹೋಗುವ ಮೂಲಕ ಪ್ರತಿಭಟನೆ ನಡೆಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಟಿ.ಎಸ್.ಸುನೀತ್‌ಕುಮಾರ್ ಮಾತನಾಡಿ, ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಹೆಚ್ಚಿಸಿ ಲೀಟರಿಗೆ ತಲಾ 3 ರೂ. ಏರಿಸಿರುವುದು ರಾಜ್ಯದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ತೈಲ ದರ ಹೆಚ್ಚಳದಿಂದ ರಾಜ್ಯದ ಖಜಾನೆಗೆ ಈ ಆರ್ಥಿಕ ವರ್ಷದಲ್ಲಿ ಸುಮಾರು 3ಸಾವಿರ ಕೋಟಿ ರೂ.ಗಳ ಹೆಚ್ಚುವರಿ ತೆರಿಗೆ ವಸೂಲಿಯಾಗಲಿದೆ. ಇದರಿಂದ ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಏರಲಿದೆ. ಬೆಲೆ ಏರಿಕೆಯ ಮೇಲೆ ಸರಣಿ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವು ಮತದಾರರನ್ನು ಓಲೈಸಲು 2 ರೂ. ಕಡಿತ ಮಾಡಿತ್ತು. ರಷ್ಯಾ - ಉಕ್ರೇನ್ ಯುದ್ಧದ ಲಾಭ ಪಡೆದು ಭಾರತ ಸರ್ಕಾರವು ಜಾಗತಿಕ ದರಕ್ಕಿಂತ ಸುಮಾರು ಶೇ. 35ರಷ್ಟು ಕಡಿಮೆಗೆ ಕಚ್ಚಾ ತೈಲವನ್ನು ಖರೀದಿಸಿದ್ದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಲಕ್ಷಾಂತರ ಕೋಟಿ ರೂ.ಗಳನ್ನು ಭಾರತದ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ.
ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ. ಇನ್ನೊಂದೆಡೆ ಒಂದು ದೇಶ- ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಎರಡೂ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆಗಳನ್ನು ಹೇರುತ್ತಿವೆ. ಕೂಡಲೇ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಕೈಬಿಡಭೇಕೆಂದು ಆಗ್ರಹಿಸಿದರು.
ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಮಾತನಾಡಿ, ಬಿಜೆಪಿ ಸರ್ಕಾರ ತೈಲ ಬೆಲೆ ಏರಿಸಿದಾಗ ವಿರೋಧಿಸಿದ್ದ ಸಿದ್ದರಾಮಯ್ಯ, ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗಲಿದೆ ಎಂದಿದ್ದರು. ಅವರದೇ ಸರ್ಕಾರ ಅದನ್ನೇ ಮಾಡುತ್ತಿದೆ. ಸಾರ್ವಜನಿಕರ ಮೇಲಿನ ಪ್ರೀತಿ ಈಗ ಕಾಣೆಯಾಯಿತೆ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ ಕುಕ್ಕುವಾಡ, ಟಿವಿಎಸ್ ರಾಜು, ಮಧು ತೊಗಲೇರಿ, ತಿಪ್ಪೇಸ್ವಾಮಿ ಅಣಬೇರು, ಭಾರತಿ, ಪರಶುರಾಮ್, ಮಹಾಂತೇಶ್ ಮತ್ತು ಕಾರ್ಯಕರ್ತರಾದ ಪೂಜಾ, ಕಾವ್ಯಾ, ಸ್ಮಿತಾ, ನಾಗಜ್ಯೋತಿ, ಮಂಜುನಾಥ ರೆಡ್ಡಿ, ಗುರು ಇತರರಿದ್ದರು.