

ದಾವಣಗೆರೆ: ಮಿದುಳು ಸಂಬಂಧಿತ ಕ್ಲಿಷ್ಟಕರ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ರೋಗಿಗಳಿಗೆ ನಗರದ ಎಸ್‌ಎಸ್ ನಾರಾಯಣ ಹೃದಯಾಲಯದ ಮಿದುಳು ಹಾಗೂ ಬೆನ್ನುಹುರಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ಒಂದು ತಿಂಗಳ ಅಂತರದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದಾರೆ.
ಮಿದುಳಿನಲ್ಲಿ ಅಥವಾ ಅದರ ಸುತ್ತಲಿನ ರಕ್ತನಾಳಗಳು ಮತ್ತು ದುರ್ಬಲ ಪ್ರದೇಶದಲ್ಲಿ ಗುಳ್ಳೆ ರೂಪದಲ್ಲಿ ಕಾಣಿಸಿಕೊಂಡು ಒಡೆದು ಹೋಗುವ ಸಾಧ್ಯತೆಯಿಂದಾಗಿ ರೋಗಿಗಳು ಅಸಾಧ್ಯ ತಲೆನೋವಿಗೆ ಒಳಗಾಗುವ ಮೆದುಳಿನ ಅನುರಿಸಮ್ ತೊಂದರೆಯನ್ನು ಶಸ್ತ್ರಚಿಕಿತ್ಸೆ ಮೂಲಕ ನಿವಾರಿಸಲಾಗಿದೆ ಎಂದು ಮಿದುಳು ಹಾಗೂ ಬೆನ್ನುಹುರಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯ ಡಾ. ಸತ್ಯನಾರಾಯಣ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಲಕ್ಷ್ಮೀಪುರ ತಾಂಡದ ಷಣ್ಮುಖನಾಯ್ಕ ಅವರು ಆಸ್ಪತ್ರೆಗೆ ಬಂದಾಗ ಸಬ್‌ಅರಾಕ್ನಾಯಿಡ್ ಹೆಮರೇಜ್ ಅಥವಾ ಮಿದುಳುರಕ್ಷಣೆಯ ತೆಳುವಾಗ ಅಂಗಾಂಶಗಳಿದ್ದ ಪ್ರದೇಶದಲ್ಲಿ ರಕ್ತಸ್ರಾವಕ್ಕೆ ಒಳಗಾಗಿದ್ದರು. ಆಂಜಿಯೋಗ್ರಫಿ ಪರೀಕ್ಷೆ ನಡೆಸಲಾಗಿ ರಕ್ತನಾಳಗಳಲ್ಲಿ ಅನುರಿಸಂ ಸಮಸ್ಯೆ ಬಾಧಿಸಿದ್ದು ಅರಿವಾಗಿ ಟೆರಿಯೋನಿಯಲ್ ಕ್ರೇನಿಯೊಟಮಿ ಮತ್ತು ಕ್ಲಿಪಿಂಗ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.
ವಿಪರೀತ ತಲೆಶೂಲೆಯಿಂದ ಬಳಲುತ್ತಿದ್ದ ಕೊಟ್ಟೂರು ತಾಲೂಕಿನ ಹಲಬೂರಿನ ಗೌರಮ್ಮ ಅವರನ್ನು ಪರೀಕ್ಷಿಸಿದಾಗ ಮಿದುಳಿನ ಎರಡೂ ಕಡೆ ಅನುರಿಸಂ ಸಮಸ್ಯೆ ಬಾಧಿಸಿತ್ತು. ಹಗರಿಬೊಮ್ಮನಹಳ್ಳಿಯ ಭಾರತಿ ಅವರಲ್ಲೂ ಇಂಥಹದ್ದೇ ಸಮಸ್ಯೆ ಕಾಣಿಸಿಕೊಂಡಿತ್ತು. ಎಲ್ಲರಿಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಈ ಸಮಸ್ಯೆ 30ರಿಂದ 70 ವರ್ಷದ ವಯೋಮಾನದವರಲ್ಲಿ ಕಂಡುಬರಲಿದೆ. ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಬಾಧಿಸಲಿದೆ. ಅಧಿಕ ರಕ್ತದೊತ್ತಡ, ಧೂಮಪಾನಿಗಳು ಹಾಗೂ ಮಾದಕ ವಸ್ತುಗಳ ಬಳಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರಲಿದೆ.
ಇಂತಹ ಸಮಸ್ಯೆ ಇದ್ದವರಲ್ಲಿ ತೀವ್ರ ತಲೆನೋವು ಹೆಚ್ಚಲಿದೆ. ಇದು ಪಾರ್ಶ್ವವಾಯು, ಕೋಮಾ ಸ್ಥಿತಿಗೆ ತಲುಪಬಹುದು. ಸೂಕ್ತ ಶಸ್ತ್ರಚಿಕಿತ್ಸೆ ಪಡೆಯುವುದು ಸೂಕ್ತ ಎಂದು ವಿವರಿಸಿದರು.
ಎಸ್ಸೆಸ್ ನಾರಾಯಣ ಹೃದಯಾಲಯದಲ್ಲಿ ಎಬಿಎಆರ್‌ಕೆ ಇತರೆ ಯೋಜನೆಗಳಡಿ ಈ ಶಸ್ತ್ರಚಿಕಿತ್ಸೆಗಳನ್ನು ಸೇರ್ಪಡೆ ಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಆಡಳಿತ ವ್ಯವಸ್ಥಾಪಕ ಪ್ರಶಾಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಿದುಳು ಹಾಗೂ ಬೆನ್ನುಹುರಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಡಾ. ಅವಿನಾಶ್, ಡಾ. ಪ್ರದೀಪ್, ಚಿಕಿತ್ಸೆ ಪಡೆದು ಗುಣಮುಖರಾದವರಿದ್ದರು.