ಆತ್ಮಸಂತೋಷಕ್ಕಾಗಿ ಇರಲಿ ಬೋಧನೆ

1000387347.jpg
Published on

ದಾವಣಗೆರೆ: ಅಧ್ಯಾಪಕರು ವೇತನಕ್ಕಿಂತ ಆತ್ಮ ಸಂತೋಷಕ್ಕೆ ಆದ್ಯತೆ ನೀಡಿ ಪಾಠ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಪಿ.ರುದ್ರಪ್ಪ ಹೇಳಿದರು.
ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ ಶಿಕ್ಷಕರಲ್ಲಿ ಅಧ್ಯಯನ ಪ್ರವೃತ್ತಿ ಇರಬೇಕು ಎಂದರು.
ಮಕ್ಕಳು ವಿಜ್ಞಾನ ವಿಷಯ ಅಭ್ಯಾಸ ಮಾಡಬೇಕೆಂದು ಬಹುತೇಕ ಪಾಲಕರ ಅಭಿಲಾಷೆ. ಆಸಕ್ತಿ ರೂಢಿಸಿಕೊಂಡಲ್ಲಿ ವಿಜ್ಞಾನ-ಗಣಿತ ಯಾವುದೇ ವಿಷಯವೂ ಕಷ್ಟವಲ್ಲ. ಪರೀಕ್ಷೆಯನ್ನು ಹಬ್ಬವೆಂದು ಸ್ವೀಕರಿಸಿದಲ್ಲಿ ಭಯ ಇರುವುದಿಲ್ಲ ಎಂದು ಹೇಳಿದರು.
ಹರಪನಹಳ್ಳಿಯ ಎ.ಡಿ.ಬಿ  ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎ.ಎಂ. ರಾಜಶೇಖರಯ್ಯ ಮಾತನಾಡಿ ಅತಿಯಾದ ಮೊಬೈಲ್ ಮೋಹವು ಸಾಧನೆಗೆ ಅಡ್ಡಿಯಾಗಬಹುದು, ವಿಜ್ಞಾನ-ತಂತ್ರಜ್ಞಾನಗಳು ಜೀವನ ಸುಗಮಗೊಳಿಸಬೇಕೆ ಹೊರತು ಜೀವನ ಸಮಾಧಾನಗಳನ್ನು ನಾಶ ಮಾಡಬಾರದು ಎಂದು ತಿಳಿಸಿದರು.
ಪ್ರಾಚಾರ್ಯ ಉಮೇಶ್ ಮಾತನಾಡಿ ವಿದ್ಯಾರ್ಥಿಗಳು ಸಾಧನೆಯ ಸಂಕಲ್ಪ ಮಾಡಬೇಕು. ಶೈಕ್ಷಣಿಕ ಪ್ರಗತಿಯೆ ವಿದ್ಯಾರ್ಥಿಗಳು ಗುರುಗಳಿಗೆ ಕೊಡುವ ಗುರುದಕ್ಷಿಣೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ.ಜಿ. ಸಾಯಿ ವಿಶೇಷ ಆಹ್ವಾನಿತರಾಗಿದ್ದರು. ಎಲ್.ಎಸ್.ಶರ್ಮಿಳಾ, ಕೆ ಸಿ ವಿಜಯಕುಮಾರ್, ವಿದ್ಯಾರ್ಥಿ ಸಂಘದ ವಿಶ್ವನಾಥ್ ಲಕ್ಷ್ಮೀ ಇತರರಿದ್ದರು. ಆರ್.ದರ್ಶನ್ ಪ್ರಾರ್ಥನೆ ಹಾಡಿದರೆ, ಎಸ್.ಮೇಘನಾ ಸ್ವಾಗತಿಸಿದರು. ರೀತು ವಂದಿಸಿದರು. ಎ.ಆರ್. ಮೇಘಾ- ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.
-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net