ನೀರು ಸರಬರಾಜು ನೌಕರರ ಕಾಯಂ ವಿಳಂಬ -ನಾಳೆಯಿಂದ ಮುಷ್ಕರ

1001220953.jpg
Published on

ದಾವಣಗೆರೆ: ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರ ಕಾಯಮಾತಿ ಅಥವಾ ನೇರಪಾವತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪೌರನೀರು ಸರಬರಾಜು ನೌಕರರ ಮಹಾಸಂಘವು ಅ.6ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಈ ಮುಷ್ಕರದಲ್ಲಿ ದಾವಣಗೆರೆ ಪಾಲಿಕೆಯ 60 ಮಂದಿ ನೀರು ಸರಬರಾಜು ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರುದ್ರಮುನೇಶ್ವರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಿನದ 24 ಗಂಟೆಯೂ ನೀರು ಸರಬರಾಜು ಮಾಡುವವರು ಕಾರ್ಯೋನ್ಮುಖರಾಗಿದ್ದರೂ ಪೌರಕಾರ್ಮಿಕರ ಮಾದರಿಯಲ್ಲೇ ನೀರಗಂಟಿಗಳಿಗೆ ಕೆಲಸ ಕಾಯಂಗೊಳಿಸಲು ಸರ್ಕಾರ ಮೀನಮೇಷ ನಡೆಸಿದೆ. ವೃಂದ ಮತ್ತು ನೇಮಕಾತಿಯಡಿ ಮಂಜೂರಾದ ಹುದ್ದೆಗಳು ಹಲವಾರು ವರ್ಷದಿಂದ ಖಾಲಿ ಇದ್ದಾಗ್ಯೂ ನೀರು ಸರಬರಾಜು ನೌಕರರ ಭರ್ತಿಗೆ ಕ್ರಮ ವಹಿಸಿಲ್ಲ ಎಂದು ದೂರಿದರು.

8ನೇ ವೇತನದ ಆಯೋಗದಂತೆ ಕನಿಷ್ಠ 27 ಸಾವಿರ ರೂ. ವೇತನ ನೀಡುವ ನಿಯಮವಿದ್ದರೂ ನೀರಗಂಟಿಗಳಿಗೆ ತಿಂಗಳಿಗೆ 15 ಸಾವಿರ ರೂ. ವೇತನ ನೀಡಲಾಗುತ್ತಿದೆ. ಪಾಲಿಕೆ ಕಾಯ್ದೆ ಪ್ರಕಾರ ಪೌರ ನೀರು ಸರಬರಾಜು ನೌಕರರು ಕೂಡ ಪೌರಕಾರ್ಮಿಕರೇ ಆಗಿದ್ದರೂ ನೇರಪಾವತಿ, ಸೇವಾ ಭದ್ರತೆ ಇಲ್ಲವಾಗಿದೆ.

ರಾಜ್ಯದಲ್ಲಿನ 6 ಸಾವಿರ ಮಂದಿ ನೀರು ಸರಬರಾಜು ನೌಕರರನ್ನು ನೇರಪಾವತಿ ಅಥವಾ ಕೆಲಸ ಕಾಯಂಗೊಳಿಸುವ ಬೇಡಿಕೆ ದೃಷ್ಟಿಯಿಂದ ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರ ಕುರಿತಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಮತ್ತು ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಸ್.ಎಂ.ರಾಧಾಕೃಷ್ಣ, ಎಂ. ಬಸವರಾಜ, ಉಮೇಶ್ ಶೆಟ್ಟೆಪ್ಪ, ಅಜ್ಜಯ್ಯ, ಕೆ.ಎಚ್. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net