ಪಕ್ಷ ಬಲವರ್ಧನೆಗೆ ರಾಜ್ಯದ ಉದ್ದಗಲ ಪ್ರವಾಸ   ಯಡಿಯೂರಪ್ಪ ಘೋಷಣೆ

1000523686.jpg
Published on

ದಾವಣಗೆರೆ: ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಕ್ಷವನ್ನು ಬಲಪಡಿಸುವ ಚಿಂತನೆ ನಡೆಸಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹೊರವಲಯದ ಶಿರಮಗೊಂಡನಹಳ್ಳಿಯಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯದ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ೭೯ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿನಕ್ಕೆ ಎರಡು ಮೂರು ತಾಲೂಕುಗಳಿಗೆ ಪ್ರವಾಸ ಮಾಡಲು ತೀರ್ಮಾನಿಸಿದ್ದೇನೆ. ವರಿಷ್ಠರು, ಮುಖಂಡರೊಂದಿಗೆ ಚರ್ಚಿಸಿ ರಾಜ್ಯದ ಉದ್ಧಗಲಕ್ಕೆ ಪ್ರವಾಸ ಮಾಡಿ, ಪಕ್ಷವನ್ನು ಬಲಪಡಿಸುವ ಚಿಂತನೆ ನಡೆಸಿದ್ದೇನೆ. ಇದಕ್ಕೆ ಕಾರ್ಯಕರ್ತರು, ಮುಖಂಡರ ಸಹಕಾರ ಬೇಕು ಎಂದರು.
ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ ಪ್ರಜಾಪ್ರಭುತ್ವ ಇವತ್ತಿಗೂ ಗಟ್ಟಿಯಾಗಿ ನೆಲೆನಿಂತಿದೆ. ಇದರ ಅವಕಾಶದಿಂದಲೇ ರವೀಂದ್ರನಾಥ್ ರಂತಹ ಸರಳ, ಸಜ್ಜನಿಕೆ ವ್ಯಕ್ತಿ ಜನಪ್ರತಿನಿಧಿಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಸಾಧ್ಯವಾಗಿದೆ ಎಂದರು.
ರವೀಂದ್ರನಾಥ್ ಮತ್ತು ನನ್ನ ನಡುವೆ ಹಲವಾರು ದಶಕಗಳ ಒಡನಾಟವಿದ್ದು, ಹಲವಾರು ಏರಿಳಿತವನ್ನು ನಾವಿಬ್ಬರೂ ಕಂಡಿದ್ದೇವೆ. ಸಾರ್ವಜನಿಕ ಜೀವನ ಹೊಂದಿರುವ ನಮ್ಮಂತಹ ರಾಜಕಾರಣಿಗಳ ಬಗ್ಗೆ ಜನರು ಹಲವಾರು ರೀತಿಯ ಅಭಿಪ್ರಾಯ ಹೊಂದಿರುತ್ತಾರೆ. ಹಾಗೆಂದ ಮಾತ್ರಕ್ಕೆ ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಸಿದ್ಧಾಂತ, ಮೌಲ್ಯಗಳಿಗೆ ಬದ್ಧರಾಗಿ ಜನಪರ ನಿಲುವು, ರೈತಪರ ಕಾಳಜಿ ಹೊಂದಿ, ಜನಸೇವೆ ಮಾಡುತ್ತಾ ಬಂದಿರುವ ಜನಾನುರಾಗಿ ನೇತಾರರು ಸಿಗುವುದು ವಿರಳ. ರವೀಂದ್ರನಾಥ್ ಚುನಾವಣೆ, ಅಧಿಕಾರಕ್ಕಾಗಿ ಸಾರ್ವಜನಿಕ ಜೀವನಕ್ಕೆ ಬಂದವರಲ್ಲ.
ಶಾಸಕರು, ಸಚಿವರಾಗಿ ಜನರು ಮೆಚ್ಚುವಂತ ಕಾರ್ಯ ಮಾಡಿದ್ದಾರೆ. ರೈತ ಪರ ಹೋರಾಟಗಾರರಾಗಿ ಭದ್ರಾ ನದಿ ಹರಿಸಲು ಹೋರಾಟ ಮಾಡಿದ್ದಾರೆ. ಅವರ ದಿಟ್ಟ ಆಡಳಿತ ಮತ್ತು ಸಂಘಟನಾತ್ಮಕ ಶಕ್ತಿ ದೊಡ್ಡದು. ಇಂಥ ಮುತ್ಸದ್ಧಿ ರವೀಂದ್ರನಾಥ್ ಅವರಿಂದ ಮುಖಂಡರು ಕಲಿಯುವುದು ಸಾಕಷ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಅನೇಕರು ಹಿಂದಿನಚುನಾವಣೆಯಲ್ಲಿ ಸೋತಿದ್ದೀರಿ. ನಿಮ್ಮನ್ನು ಮಾಜಿ ಶಾಸಕರೆಂದು ಕರೆಯಲು ನೋವಾಗತ್ತಿದೆ. ನೀವು ಮತ್ತೆ ವಿಧಾನಸಭೆಗೆ ಆಯ್ಕೆಯಾಗಿ ಬರಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ. ಸೋಲಿನ ಹಿನ್ನಡೆಯಿಂದ ಮನೆಯಲ್ಲಿ ಕೂರದೆ ಇಂದಿನಿಂದಲೇ ಶ್ರಮ ಹಾಕಿ. ನೀವು ಯಾವ ಸಮಯದಲ್ಲಿ ಕರೆದರೂ ನಾನು ದಾವಣಗೆರೆಗೆ ಬರಲು ಸಿದ್ದನಿದ್ದೇನೆ ಎಂದು ಅಭಯ ನೀಡಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಮಾತನಾಡಿ, ಹಿಂದೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಾಲ್ವರು ಮಾತ್ರ ಬಿಜೆಪಿಯಿಂದ ಆಯ್ಕೆಯಾಗಿದ್ದರು. ವೀರೇಂದ್ರ ಪಾಟೀಲ್ ಅವಧಿಯಲ್ಲಿ ರೈತರಿಗೆ ಸಾಲ ಮನ್ನಾ ಮಾಡಿಸಿದ್ದೇನೆ. ಬಿಜೆಪಿ ಪ್ರಜ್ವಲವಾಗಲಿ, ಯಡಿಯೂರಪ್ಪ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗಿ ಅಧಿಕಾರ ಹಿಡಿಯಲಿ ಎಂದು ಆಶಿಸಿದರು.
ಜಿಲ್ಲೆಗೆ ಅಂಟಿದ್ದ ಗ್ರಹಣ ಬಿಟ್ಟಿದೆ. ಪಕ್ಷದಲ್ಲಿ ಇನ್ನು ಒಳ್ಳೆಯದಾಗಬಹುದು ಎಂದರು.
ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ರವೀಂದ್ರನಾಥ್ ಜನ್ಮದಿನವೇ ರಾಷ್ಟ್ರೀಯ ಸಂವಿಧಾನ ದಿನವಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ತುಳಿತಕ್ಕೊಳಗಾದವರ ಪರ ಹೋರಾಡಿ, ಸಂವಿಧಾನ ಗ್ರಂಥವನ್ನು ದೇಶಕ್ಕೆ ನೀಡಿದರು. ಆದರೆ, ವಿಪರ್ಯಾಸವೆಂದರೆ ವೋಟ್‌ಬ್ಯಾಂಕ್ ಗಾಗಿ ಅಂಬೇಡ್ಕರ್ ಹೆಸರು ಹೇಳಿಕೊಂಡು ಕಾಂಗ್ರೆಸಿಗರು ರಾಜಕಾರಣ ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ನಾಡು ಕಂಡ ಅಪರೂಪದ ರಾಜಕಾರಣಿ, ರೈತ ನಾಯಕ. ಅವರು ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ, ರಾಜಕೀಯದಿಂದಲ್ಲ. ಅವರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮತ್ತೆ ಪಕ್ಷ ಬಲಪಡಿಸಲಾಗುವುದು. ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಉಪಚುನಾವಣೆ ಫಲಿತಾಂಶ ದಿಕ್ಸೂಚಿ ಅಲ್ಲ, ರಾಜಾಹುಲಿ ಬಿಎಸ್ ವೈ ಇದ್ದಾರೆ ಎಂದು ಹೇಳಿದರು.
ಹಿಂದೂ ಹುಲಿ ಎಂದು ಸ್ವಯಂಘೋಷಣೆ ಮಾಡಿಕೊಂಡವರು ಇಲಿ ಮಾತ್ರ ಎಂದು ಯತ್ನಾಳ್ ವಿರುದ್ದ ಕಿಡಿ ಕಾರಿದರು. ಬಿಜೆಪಿ ಕಟ್ಟಿದ್ದು ಮತ್ತು ಬೆಳೆಸಿದ್ದು ಬಿಎಸ್ ಯಡಿಯೂರಪ್ಪ. ಅವರೇ ರಾಜಾಹುಲಿ. ಈಗ ವಿಜಯೇಂದ್ರ ಕೂಡ ಅವರ ತಂದೆಯ ಹಾದಿಯಲ್ಲಿರುವ ಜೂನಿಯರ್ ರಾಜಹುಲಿ ಎಂದು ಹೇಳಿದರು.
ರತ್ನಮ್ಮ ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಪ್ರೊ. ಎನ್. ಲಿಂಗಣ್ಣ, ಎಂ. ಬಸವರಾಜನಾಯ್ಕ, ಎಚ್. ಪಿ. ರಾಜೇಶ್, ಅರುಣಕುಮಾರ್ ಪೂಜಾರ್, ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ಬಿ. ಜಿ. ಅಜಯಕುಮಾರ್, ಮರಿಸ್ವಾಮಿ, ನಾಗರಾಜ ಲೋಕಿಕೆರೆ, ಮಲ್ಲಿಕಾರ್ಜುನ ಮಾಡಾಳು, ಚಂದ್ರಶೇಖರ್ ಪೂಜಾರ್, ಕೆ.ಎಂ. ಸುರೇಶ್, ಕೊಳೇನಹಳ್ಳಿ ಸತೀಶ್, ಆಲೂರು ನಿಂಗರಾಜ್, ಅನಿಲ್ಕುಮಾರ್, ಕಲ್ಲೇಶ್ ಇದ್ದರು.
……
ಬಿಎಸ್‌ವೈ ವಿರುದ್ಧ ಮಾತಾಡಿದ್ರೆ ನೋವಾಗುತ್ತೆ
ಲೋಕಸಭಾ ಚುನಾವಣೆ ಸೋಲಿಗೆ ನಾವ್ಯಾರೂ ಕಾರಣರಲ್ಲ. ಯಾವ ಹೊಂದಾಣಿಕೆಯನ್ನೂ ಮಾಡಿಕೊಳ್ಳಲಿಲ್ಲ. ರವೀಂದ್ರನಾಥ್ ಅವರಿಗೆ ವರಿಷ್ಠರು ಚುನಾವಣಾ ಪ್ರಭಾರ ವಹಿಸಿದ್ದರೂ ಬಳಸಿಕೊಳ್ಳಲಿಲ್ಲ. ಈಗ ಬಿ ಎಸ್ ವೖ, ವಿಜಯೇಂದ್ರ, ರವಿಯಣ್ಣ ಚುನಾವಣಾ ಸೋಲಿಗೆ ಕಾರಣ ಎನ್ನುವುದು ಸರಿಯಲ್ಲ. ಇದಕ್ಕೆ ಸ್ವಯಂಕೃತ ಅಪರಾಧ ಕಾರಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಿದ್ದೇಶ್ವರ್‌ ಹೆಸರು ಹೇಳದೆ ಟೀಕಿಸಿದರು.
ದಿ.ಮಲ್ಲಿಕಾರ್ಜುನಪ್ಪ ಅವರ ಬಗ್ಗೆ ಮಾತನಾಡುವುದಿಲ್ಲ, ಬಿಎಸ್ ವೈರ ಬಳಿ ಉಂಡು ತಿಂದು ಸಾವಿರಾರು ಕೋಟಿ ಹಣ ಮಾಡಿಕೊಂಡು ಈಗ ಅವರ ವಿರುದ್ಧ ಮಾತನಾಡುವುದನ್ನು ಕಂಡರೆ ನೋವಾಗುತ್ತದೆ ಎಂದು ಮಾಜಿ ಸಂಸದರಿಗೆ ಟಾಂಗ್ ಕೊಟ್ಟರು.
…….

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net