

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಪಹಣಿ, ಮ್ಯುಟೇಷನ್, ಸ್ಟಾೃಂಪ್ ಡ್ಯೂಟಿ, ಹದ್ದುಬಸ್ತು ಶುಲ್ಕ, ಮೋಟಾರು ವಾಹನಗಳ ಮೇಲಿನ ತೆರಿಗೆ ಇತ್ಯಾದಿ ಹೆಚ್ಚಳ ಮಾಡಿದೆ. ಗ್ಯಾರಂಟಿ ಯೋಜನೆ ಫಲಾನುಭವಿಗಳ ಮನೆಯಿಂದಲೇ ಹೆಚ್ಚುವರಿ ದರವನ್ನು ದೋಚುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ದೂರಿದರು.
ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳಿಗೆ ತಗಲುವ 50 ಸಾವಿರ ಕೋಟಿ ರೂ.ಗಳನ್ನು ಖಜಾನೆಗೆ ತುಂಬಲು ಹೆಚ್ಚುವರಿ ದರ ವಿಧಿಸಿದೆ. ಬಲಗೈಯಲ್ಲಿ ನೀಡಿ ಎಡಗೈಯಲ್ಲಿ ಕಸಿದುಕೊಳ್ಳುತ್ತಿದೆ. ಇದಕ್ಕೆ ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ರೈತರಿಗೆ ಹೆಚ್ಚುವರಿ ಭಾರ ಹೊರೆಸಿದ್ದರ ವಿರುದ್ಧ ರೈತ ಸಂಘ ಶೀಘ್ರವೇ ಚಳವಳಿ ರೂಪಿಸಲಿದೆ ಎಂದು ಹೇಳಿದರು.
ಬರಗಾಲದ ಹಿನ್ನೆಲೆಯಲ್ಲಿ ತರಿಗೆ ಸರಿಯಾದ ಪರಿಹಾರ ದೊರೆತಿಲ್ಲ. ಜಮೀನು ಬೀಳು ಬಿಟ್ಟವರು ಹಾಗೂ ಬೆಳೆ ಬೆಳೆದ ರೈತರಿಗೂ ಕನಿಷ್ಠ ಎಕರೆಗೆ 25 ಸಾವಿರ ರೂ.ಗಳ ಪರಿಹಾರ ನೀಡಬೇಕು. ಕೇಂದ್ರ ಹಾಗೂ ರಾಜ್ಯದ ಮಾರ್ಗಸೂಚಿ ದರದಾಚೆಗೂ ಹೆಚ್ಚಿನ ನೆರವು ಕಲ್ಪಿಸಬೇಕು. ೀಈ ಸಂಬಂಧ ರೈತರ ಜಮೀನುಗಳ ಖಾತೆಗಳ ಜೋಡಣೆಗೆ ರೈತ ಸಂಘದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಸಾಲ ಇನ್ನಿತರೆ ಕಾರಣಕ್ಕೆ ಬ್ಯಾಂಕ್‌ಗಳು ಜಮೆ ಮಾಡುವಂತಿಲ್ಲ ಎಂಬುದಾಗಿ ಸರ್ಕಾರವೇ ಸೂಚನೆ ನೀಡಿದೆ. ಹೀಗಿದ್ದೂ ಕೆಲವೆಡೆ ಬ್ಯಾಂಕ್ ಅಧಿಕಾರಿಗಳು ಮೊಂಡಾಟ ಮಾಡುತ್ತಿದ್ದಾರೆ. ಕೆಲವೆಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲಾ ಸಂಘಗಳು ಚಳವಳಿ ನಡೆಸಬೇಕು. ಆತ್ಮಹತ್ಯೆಗೀಡಾದ ರೈತರಿಗೆ ಪರಿಹಾರ ಕೊಡಿಸಲು ಫಾಲೋಅಪ್ ಮಾಡಬೇಕೆಂದು ತಿಳಿಸಿದರು.
ರೈತ ಸಂಘದ ಪದಾಧಿಕಾರಿಗಳು ಕೃಷಿ ಅಧಿಕಾರಿಗಳನ್ನು ಕರೆದೊಯದ್ದು ಬಿತ್ತನೆ ಬೀಜ, ರಸಗೊಬ್ಬರದ ಅಂಗಡಿಗಳು ಎಂಆರ್‌ಪಿ ಪಟ್ಟಿಯ ಫಲಕ ಹಾಕಿಸಲು ಒತ್ತಡ ತರಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ದೂರು ನೀಡಬೇಕು. ಪಡೆದ ಸಾಂಗ್ರಿಗಳ ಸಂಬಂಧ ರಸೀದಿ ಪಡೆಯಬೇಕು. ಅನ್ನದಾತರು ಕೊಳ್ಳುವ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಬಾರದು ಎಂದು ಸರ್ಕಾರವನ್ನು ಆಗ್ರಹಿಸಲಾಗುವುದು.. ವಿದ್ಯುತ್ ಪರಿವರ್ತಕ ಅಳವಡಿಕೆ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸುವ ವಿದ್ಯುಶ್ಚಕ್ತಿ ಸ್ವಯಂ ವೆಚ್ಚ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಹೆಚ್ಚಿನ ಕೊಳವೆಬಾವಿ ಕೊರೆಸುವ ನಿಟ್ಟಿನಲ್ಲಿ ಬೋರ್‌ವೆಲ್ ಲಾರಿಗಳು ದರೋಡೆ ಮಾಡುತ್ತಿವೆ. ಇರುವ ಕೊಳವೆಬಾವಿಗೆ ಜಲಮರಪೂರಣಕ್ಕೆ ರೈತರು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಸಾವಯವ ಕೃಷಿ ಹಾಗೂ ಮಳೆ ನೀರು ಕೊಯ್ಲು ಕುರಿತಂತೆ ಶೀಘ್ರವೇ ಸಂಘದಿಂದ ಅಧ್ಯಯನ ಶಿಬಿರ ಆಯೋಜಿಸಲಾಗುವುದು ಎಂದರು.
ಉತ್ತರಪ್ರದೇಶ, ಹರಿಯಾಣ, ಪಂಜಾಬ್‌ಗಳಲ್ಲಿ ರೈತರ ಹೋರಾಟದ ತೀವ್ರತೆಯಿಂದಾಗಿ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬಿದ್ದಿತು. ಅಂಥಹ ಹೋರಾಟ ಕರ್ನಾಟಕದಲ್ಲಿ ಆಗುತ್ತಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ರೈತ ಸಂಘ ಸ್ಪರ್ಧೆ ಮಾಡುವಂತಾಗಬೇಕು. ಈ ಸಂಬಂಧ ಪ್ರತ್ಯೇಕ ಸಭೆ ನಡೆಸಬೇಕು. ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ಏರಿಕೆಗೆ ಕಡಿವಾಣ ಹಾಕುವತ್ತಲೂ ಗಮನ ಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಶಿವಪ್ಪ ಕೋಲಾರ, ಅಮೀನ್ ಪಾಷಾ, ರಾಜ್ಯ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪ, ಹಿಟ್ಟೂರು ರಾಜು, ಮಲ್ಲಿಕಾರ್ಜುನ್, ಕೊಟ್ಟೂರು ಭರಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನೂರು ರಾಜು, ಗೋಶಾಲೆ ಬಸವರಾಜು, ಪಾಲಾಕ್ಷಿ ಇತರರಿದ್ದರು.
----