ದಾವಣಗೆರೆಯಲ್ಲಿ ಕ್ರೀಡಾ ಸಂಸ್ಕೃತಿ ಜೀವಂತ

1001243973.jpg
Published on

ದಾವಣಗೆರೆ: ದಾವಣಗೆರೆಯಲ್ಲಿ ಕ್ರೀಡಾ ಸಂಸ್ಕೃತಿ ಜೀವಂತವಿದ್ದು, ಅನೇಕ ಕ್ರೀಡೆ, ಕ್ರೀಡಾಕೂಟಗಳಿಗೆ ಉತ್ತೇಜಿಸುವ ಸೂಕ್ತ ವಾತಾವರಣ ಇಲ್ಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ, 15, 17 ವರ್ಷದೊಳಗಿನ ಬಾಲಕ-ಬಾಲಕಿಯರ ಯೂನೆಕ್ಸ್ ಸನ್‌ರೈಸ್- ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ ವರ್ಷದಲ್ಲಿ ಕುಸ್ತಿ, ಖೋಖೋ, ಚೆಸ್, ಕೇರಂ, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಕ್ರಿಕೆಟ್ ಮೊದಲಾದ ಕ್ರೀಡೆಗಳನ್ನು ಸಂಸ್ಥೆಗಳು ಆಯೋಜಿಸುತ್ತಿವೆ. ಈಜುಕೊಳ ದುರಸ್ತಿಯಾಗಿದೆ. ಉತ್ತಮ ಜಿಲ್ಲಾ ಕ್ರೀಡಾಂಗಣವೂ ಇದೆ. ತರಬೇತುದಾರರು, ಕ್ರೀಡಾಪಟುಗಳಲ್ಲಿ ಉತ್ಸಾಹವೂ ಹೆಚ್ಚಿದೆ ಎಂದು ಹೇಳಿದರು.

ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರೀಡಾಂಗಣ ನಿರ್ಮಾಣಕ್ಕೆ ಶಾಮನೂರು ಶಿವಶಂಕರಪ್ಪ ಅವರು ಭೂಮಿಪೂಜೆ ಮಾಡಿದ್ದರು. ಕ್ರೀಡಾ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅನುದಾನ ಬಿಡುಗಡೆಗೊಳಿಸಿದ್ದರು. ಇದೀಗ 35 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇಲ್ಲಿನ ವುಡನ್ ಅಂಕಣಗಳನ್ನು ಸಿಂಥೆಟಿಕ್‌ಗೆ ಪರಿವರ್ತಿಸುವ ಬೇಡಿಕೆ ಈಡೇರಿಕೆ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.

ಕ್ರೀಡೆಗಳಿಂದ ದೈಹಿಕವಲ್ಲದೆ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವೂ ಸಿಗಲಿದೆ. ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕೇವಲ ಅಂಕ ಗಳಿಕೆಗೆ ಸೀಮಿತವಾಗಿಸದೆ ಕ್ರೀಡೆಗಳಲ್ಲಿ ಭಾಗಿಯಾಗಿ, ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಜೀವನದಲ್ಲಿ ಮುಂದುವರಿಸಬೇಕು. ಬೇಸಿಗೆ ರಜಾ ದಿನದಲ್ಲೂ ಅಭ್ಯಾಸ ಮಾಡಲು ಕುಟುಂಬ ಸದಸ್ಯರೂ ಸಹಕರಿಸಬೇಕು ಎಂದರು.

ಕ್ರೀಡಾಭ್ಯಾಸದಿಂದ ಶಿಸ್ತು, ನಾಯಕತ್ವ ಕೌಶಲ ಬರಲಿದೆ. ದೈನಂದಿನ ಒತ್ತಡ ನಿವಾರಣೆ ಜತೆಗೆ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಣ ಮಾಡಬಹುದು. ಜೀವನ ಕೌಶಲವನ್ನು ಬೆಳೆಸಿಕೊಳ್ಳಬಹುದು. ಅನೇಕರು ಪ್ರಕಾಶ್ ಪಡುಕೋಣೆ, ಸೈನಾ ನೆಹ್ವಾಲ್, ಪಿ.ವಿ. ಸಿಂಧು ರೀತಿಯಲ್ಲೇ ದಾವಣಗೆರೆಯ ಕ್ರೀಡಾಪಟುಗಳು ರಾಷ್ಟ ಮಟ್ಟದ ಖ್ಯಾತಿ ಪಡೆಯುವ ಎತ್ತರಕ್ಕೆ ಬೆಳೆಯಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಪಿ. ರಾಜೇಶ್, ಜಿಲ್ಲಾಧ್ಯಕ್ಷ ಎಸ್.ಎನ್. ಬಸವರಾಜ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಡಿಡಿ ಶ್ರೀಹರ್ಷ, ಮಹೇಶ್ ಆರ್. ಶೆಟ್ಟಿ. ಜಿಲ್ಲಾ ಕಾರ್ಯದರ್ಶಿ ಡಿ.ಆರ್ ಗಿರಿರಾಜು ಇದ್ದರು.

ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾದ ಪಂದ್ಯಾವಳಿಯಲ್ಲಿ ಬಾಲಕ-ಬಾಲಕಿಯರು ಸೇರಿ 698 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. 10 ವಿಧದಲ್ಲಿ ಅ.19ರವರೆಗೆ ಟೂರ್ನಿ ನಡೆಯಲಿದೆ.

ಶ್ರೇಯಾಂಕಿತ ಆಟಗಾರರಾದ ಹರ್ಷದ ಶಾದಿಜ್, ಮೆಹುಲ್ ಮಾನವ ಅರುಳ್‌ಮುರುಗನ್, ಆರವ್ ಬಸಕ್, ಹಿತೈಶ್ರೀ ಎಲ್.ರಾಜಯ್ಯ, ನಿಧಿ ಆತ್ಮಾರಾಂ, ಆಶಿ ದಾಸ್, ಧನ್ಯಾ ಮಂಜುನಾಥ್, ಕಂಡಿಬಿಲ್ಲ ಶ್ರೇಯಾ, ಎಸ್. ಸ್ಮತಿ, ಸಿ. ವಿಹಾನ್, ದೇವಾಂಶ್ ಚೌದರಿ ಇತರರು ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net