ಸದ್ದಿಲ್ಲದೇ ಶುರುವಾಗಿದೆ ಪಟಾಕಿ ವ್ಯಾಪಾರ

1001257884.jpg
Published on

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಪಟಾಕಿ ಖರೀದಿ ಸದ್ದಿಲ್ಲದೆ ಶುರುವಾಗಿದೆ. ಇಲ್ಲಿನ ಬಾಲಕರ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾದ 80 ತಾತ್ಕಾಲಿಕ ಮಳಿಗೆಗಳು ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೂ ವಹಿವಾಟಿಗೆ ಭಂಗವಿಲ್ಲ!

ಶನಿವಾರ ರಾತ್ರಿಯಷ್ಟೇ ಜಿಲ್ಲಾಡಳಿತ ಪರವಾನಗಿ ನೀಡಿದ್ದರಿಂದ ಪಟಾಕಿ ತಾತ್ಕಾಲಿಕ ಪರವಾನಗಿ ಪಡೆದ ವರ್ತಕರು, ಭಾನುವಾರ ತಮಗೆ ನಿಗದಿಪಡಿಸಿದ ಮಳಿಗೆಗಳಲ್ಲಿ ಕೆಲಸಗಾರರೊಂದಿಗೆ ರವಿವಾರ ಭಾನುವಾರ ಸರಂಜಾಮು ಸಜ್ಜುಗೊಳಿಸಿಕೊಂಡರು.

ಸರ್ಕಾರದ ನಿಬಂಧನೆಯಂತೆ ಪ್ರತಿ ಮಳಿಗೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗ್ನಿನಂದಕ, ಹೊರಾವರಣದಲ್ಲಿ ಡ್ರಮ್, ನೀರು, ಮರಳಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನದವರೆಗೂ ಅಗ್ನಿಶಾಮಕ ವಾಹನ ಈ ಸ್ಥಳದಲ್ಲಿ ಗೈರಾಗಿತ್ತು!

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಮಗಾರಿ ನಡೆಯುತ್ತಿದ್ದು ಸಂಚಾರ ದಟ್ಟಣೆಯ ಒತ್ತಡ ಹೈಸ್ಕೂಲ್ ಮೈದಾನದತ್ತ ಕಾಣಿಸಬಹುದು. ಅಲ್ಲದೆ ಜನಸಂದಣಿ ಪ್ರದೇಶ ಕೈಬಿಟ್ಟು ಹೊರವಲಯದಲ್ಲಿ ತಾತ್ಕಾಲಿಕ ಮಾರಾಟ ಮಳಿಗೆ ತೆರೆಯಬೇಕೆಂಬ ಒತ್ತಡವಿತ್ತು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರೊಬ್ಬರು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಮಧ್ಯಪ್ರವೇಶದಿಂದಾಗಿ ವಿಘ್ನ ದೂರಾಗಿದೆ. ಹೈಸ್ಕೂಲ್ ಮೈದಾನದಲ್ಲೇ ಅವಕಾಶ ದಕ್ಕಿದೆ.

ಸೋಮವಾರ ಅಮಾವಾಸ್ಯೆ ಶುರುವಾಗಲಿದ್ದು, ಬಹುತೇಕ ಅಂಗಡಿಯವರು ಲಕ್ಷ್ಮಿಪೂಜೆ ಮಾಡಲಿದ್ದಾರೆ. ಇದರ ಭಾಗವಾಗಿ ಪಟಾಕಿ ಸಿಡಿಸುವುದು ವಾಡಿಕೆ. ಹೀಗಾಗಿ ಭಾನುವಾರ ಪಟಾಕಿ ಖರೀದಿ ಆರಂಭವಾಗಿದ್ದು ಮಧ್ಯಾಹ್ನದ ಬಿರುಬಿಸಿಲಿನ ನಡುವೆಯೂ ಪಾಲಕರು ಮಕ್ಕಳೊಂದಿಗೆ ಬಂದು ಖರೀದಿ ನಡೆಸಿದರು. ಸಂಜೆ ನಂತರ ಜನಸಂದಣಿ ಹೆಚ್ಚಿತ್ತು.

ಫ್ಯಾನ್ಸಿ ಐಟಂಗೆ ಬೇಡಿಕೆ

ಗ್ರಾಹಕರು ಮಸಿಕುಡಿಕೆ, ಭೂಚಕ್ರ, ಹನುಮಂತನ ಬಾಲ, ರಾಕೆಟ್, ಶಾಟ್ಸ್, ಸುರ್‌ಸುರ್‌ಬತ್ತಿ ಮೊದಲಾದ ಇಷ್ಟದ ಕ್ಯಾಕರ್ಸ್‌ಗಳನ್ನು ಕೇಳಿ ಪಡೆಯುತ್ತಿದ್ದರು. ಕಡಿಮೆ ಶಬ್ಧ ಸೂಸುವ ಪಟಾಕಿಗಳು, ಪಿಕಾಕ್, ಹೆಲಿಕಾಪ್ಟರ್ ಮಾದರಿಯ ಪಟಾಕಿಗಳನ್ನೂ ಯುವಕರು ಕೊಂಡರು.

ಹೆವಿ ಲೈಸೆನ್ಸ್ ಪಡೆದಿರುವ ನಮ್ಮ ಕುಟುಂಬ ಕಳೆದ 60 ವರ್ಷದಿಂದಲೂ ನಿರಂತರ ಪಟಾಕಿ ಮಾರಾಟ ಮಾಡುತ್ತ ಬಂದಿದೆ. ಪಟಾಕಿ ಕ್ರೇಜ್ ಕಡಿಮೆಯಾಗಿಲ್ಲ. ಈ ಬಾರಿಯೂ ಫ್ಯಾನ್ಸಿ ಪಟಾಕಿಗಳಿಗೆ ಹೆಚ್ಚು ಬೇಡಿಕೆ ಇದೆ. ಬೀಡಿ ಪಟಾಕಿ, ಬಿಜಲಿ, ಜಿಲ್‌ಜಿಲ್, ಬೆಳ್ಳುಳ್ಳಿ ಪಟಾಕಿ ಕೇಳಿ ಪಡೆಯುತ್ತಿದ್ದಾರೆ ಎಂದು ಹಳೆಯ ವರ್ತಕ ಶಿವು ಐನಳ್ಳಿ ಹೇಳಿದರು.

ಸುಪ್ರೀಂಕೋರ್ಟ್ ಸೂಚನೆಯಂತೆ ಎಲ್ಲೆಡೆ ಹಸಿರು ಪಟಾಕಿ ಚಿಹ್ನೆ ಮುದ್ರಿತ ಪಟಾಕಿಗಳು ಮಾರಾಟ ಆಗುತ್ತಿವೆ. ಪಟಾಕಿ ಗಿಫ್ಟ್ ಬಾಕ್ಸ್‌ಗಳು 400 ರೂ.ನಿಂದ ಹಿಡಿದು 1500 ರೂ. ದರದಲ್ಲಿ ಸಿಗಲಿವೆ ಎಂದು ಮತ್ತೊಬ್ಬ ವರ್ತಕ ಎಸ್.ಎನ್.ಶಿವಾನಂದ್ ಮಾಹಿತಿ ನೀಡಿದರು.

ಶೇ.15ರಷ್ಟು ದರ ಜಿಗಿತ

ಮಾರುಕಟ್ಟೆಯಲ್ಲಿ ಪಟಾಕಿ ದರ ಕಳೆದ ಬಾರಿಗಿಂತ ಶೇ.15ರಷ್ಟು ಜಿಗಿದಿತ್ತು. ಪಟಾಕಿ ತಯಾರಿಕೆಗೆ ಬೇಕಾದ ರಾಸಾಯನಿಕ ಮದ್ದಿನ ಕೊರತೆ ಹಾಗೂ ಬೋನಿಯಂ ನೈಟ್ರೇಟ್ ಕಡಿಮೆ ಉತ್ಪಾದಿಸುವ ಕಾರಣಗಳಿಂದಾಗಿ ದರ ಏರಿಕೆ ಸಹಜವಾಗಿದೆ. ಇದು ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೆಲವು ವರ್ತಕರು ಅನಿಸಿಕೆ ಹಂಚಿಕೊಂಡರು.

ದಾವಣಗೆರೆ ಜಿಲ್ಲೆಗೆ ಹತ್ತಿರದ ಪ್ರದೇಶವಾದ ಶಿವಕಾಶಿಯಿಂದಲೇ ಪಟಾಕಿ ಬರಲಿದೆ. ಮುಂಗಡ ಬುಕಿಂಗ್ ಮಾಡಿಕೊಂಡಿರುವ ಡೀಲರ್‌ಗಳು ಅಗತ್ಯ ಪಟಾಕಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಾರೆ. ಒಂದೊಂದು ತಾತ್ಕಾಲಿಕ ಮಳಿಗೆಯಲ್ಲಿ ಕನಿಷ್ಠ 2 ಲಕ್ಷ ರೂ.ನಿಂದ ಹಿಡಿದು ಗರಿಷ್ಠ 14 ಲಕ್ಷ ರೂ.ವರೆಗೆ ಪಟಾಕಿ ಸಾಮಗ್ರಿ ಬಂಡವಾಳ ಹೂಡಲಾಗಿದೆ ಎಂದೂ ಹೇಳಿದರು.

8 ಕೋಟಿ ರೂ. ದಾಟೀತೇ ವಹಿವಾಟು?

ತಾತ್ಕಾಲಿಕ ಮಳಿಗೆಗಳಲ್ಲಿ ಅ. 23ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ 3.5 ಕೋಟಿ ರೂ. ವಹಿವಾಟು ನಡೆದಿತ್ತು ಎನ್ನಲಾಗಿದೆ. ದೊಡ್ಡ ಪಟಾಕಿಗಳ ಅಬ್ಬರ ಇಲ್ಲದಿದ್ದರೂ ಮಾರಾಟಕ್ಕೆ ಪೂರಕ ವಾತಾವರಣವಿದೆ. ಮಳೆ ಅಬ್ಬರ ಇರದಿದ್ದಲ್ಲಿ ಪಟಾಕಿ ವಹಿವಾಟು 8 ಕೋಟಿ ರೂ. ದಾಟಬಹುದು ಎಂಬುದು ವರ್ತಕರ ಲೆಕ್ಕಾಚಾರ.

---

ಕಳೆದ ಬಾರಿ ಬೇರೊಬ್ಬ ವರ್ತಕರ ಬಳಿ ಕೆಲಸ ಮಾಡಿದ್ದೆ. ಈ ಬಾರಿ ತಾತ್ಕಾಲಿಕ ಪರವಾನಗಿ ಪಡೆದು, 2 ಲಕ್ಷ ರೂ. ಬಂಡವಾಳ ಹಾಕಿ ಪಟಾಕಿ ಮಾರಾಟ ಮಾಡುತ್ತಿದ್ದೇನೆ. ಜನರು ಒಳ್ಳೆಯ ಬ್ರಾೃಂಡ್‌ನ ಗುಣಮಟ್ಟದ ಪಟಾಕಿಗಳನ್ನು ಖರೀದಿಸಬೇಕು.

ಟಿ. ಕರಿಬಸಪ್ಪ

ಪಟಾಕಿ ವ್ಯಾಪಾರಿ.

--

ಹಸಿರು ಪಟಾಕಿಗಳಿಗೆ ಆದ್ಯತೆ ನೀಡಲಾಗಿದೆ. ಹೆಚ್ಚು ಸೌಂಡ್ ಮಾಡಬಲ್ಲ, ಹೊಗೆ ಸೂಸಿ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳ ಅಬ್ಬರ ಕಡಿಮೆಯಾಗಿದೆ. ಮಳಿಗೆಗಳಲ್ಲಿ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಲಾಗಿದೆ.

ಎಂ. ಪ್ರವೀಣ್‌ಕುಮಾರ್

ಪಟಾಕಿ ವರ್ತಕ.

--

ಶಿವಕಾಶಿಯಲ್ಲಿ ಅಗ್ನಿ ದುರಂತಗಳು ನಡೆದರೂ ಪಟಾಕಿ ಉತ್ಪನ್ನ ಉತ್ಪಾದನೆಯಲ್ಲಿ ಯಾವ ವ್ಯತ್ಯಯವೂ ಆಗಿಲ್ಲ. ಪಟಾಕಿ ಮಾರಾಟದ ದರದಲ್ಲಿ ಶೇ.15ರಷ್ಟು ದರ ಹೆಚ್ಚಳ ಸಹಜ. ತಾತ್ಕಾಲಿಕ ಮಳಿಗೆಗಳಿಗೆ ವರ್ತಕರು ತಲಾ 35 ಸಾವಿರ ರೂ. ಶುಲ್ಕ ಕಟ್ಟಿದ್ದಾರೆ. ಈಗಲೇ ನಿಶ್ಚಿತ ವಹಿವಾಟು ಪ್ರಮಾಣ ಹೇಳಲಾಗದು.

ಪಿ.ಸಿ.ಶ್ರೀನಿವಾಸ್

ಪಟಾಕಿ ಮಾರಾಟಗಾರರು, ಬಳಕೆದಾರರ ಸಂಘದ ಅಧ್ಯಕ್ಷ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net