

ದಾವಣಗೆರೆ: ದಾವಣಗೆರೆಯಲ್ಲಿ ಎಸ್‌ಟಿಪಿಐ ಬೆಳವಣಿಗೆಯಿಂದಾಗಿ ಮುಂಬರುವ ಐದು ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ರಫ್ತಿನ ಪ್ರಮಾಣ ಗಮನಾರ್ಹವಾಗಿ ಹಿಗ್ಗಲಿದೆ ಎಂದು ಬೆಂಗಳೂರು ಎಸ್‌ಟಿಪಿಐನ ಕ್ಷೇತ್ರೀಯ ನಿರ್ದೇಶಕ ಡಾ. ಸಂಜಯ್ ತ್ಯಾಗಿ ಆಶಿಸಿದರು.
ಜಿಲ್ಲಾಡಳಿತ, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ದಾವಣಗೆರೆ ವಿಜನ್, ಬಿಐಇಟಿ ಸಹಯೋಗದಲ್ಲಿ ಇಲ್ಲಿನ ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಟಿಪಿಐ- ಕೌಶಲ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಎಸ್‌ಟಿಪಿಐ ಕಾರಣಕ್ಕೆ ಕೊಯಂಬತ್ತೂರಿನಲ್ಲಿ ರಫ್ತು ಶೇ. 265ರಷ್ಟು ಹೆಚ್ಚಾಗಿದ್ದರೆ, ಗಾಂಧಿನಗರದಲ್ಲಿ ಶೇ.144, ಇಂದೋರ್‌ನಲ್ಲಿ ಶೇ.153ರಷ್ಟು ಹಿಗ್ಗಿದೆ. ಎರಡನೇ ಹಂತದ ನಗರಗಳಲ್ಲಿಯೂ ಗಮನಾರ್ಹ ಪರಿಣಾಮವಾಗುತ್ತಿದೆ. ದಾವಣಗೆರೆಯಲ್ಲೂ ಇದರ ಬೆಳವಣಿಗೆ ಶೇ.300ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮೂರು ವರ್ಷದ ಹಿಂದೆ ಶುರುವಾಗಿದ್ದ ಎಸ್.ಟಿ.ಪಿ.ಐ. ಭಾರೀ ಬೆಳವಣಿಗೆ ಕಂಡಿದೆ. ಇಲ್ಲಿ ಸ್ಥಾಪಿತ ಐದು ಘಟಕಗಳಿಂದ 6 ಕೋಟಿ ರೂ. ಮೌಲ್ಯದ ರಫ್ತಾಗಿದೆ. ಇನ್‌ಕ್ಯುಬೇಷನ್ ಸೌಲಭ್ಯಕ್ಕೂ ಬೆಂಬಲ ಸಿಗುತ್ತಿದೆ. ನವೋದ್ಯಮಗಳಿಗೂ ಉತ್ತೇಜನ ನೀಡಲಾಗಿದೆ ಎಂದರು.
ಇಲ್ಲಿರುವ ಇನ್‌ಕ್ಯುಬೇಷನ್, ಮಾರ್ಗದರ್ಶಕರ ಸೌಲಭ್ಯಗಳು ನವೋದ್ಯಮಗಳಿಗೆ ಸಹಕಾರಿಯಾಗಿವೆ. ದಾವಣಗೆರೆಯಲ್ಲಿ ಒಂಬತ್ತು ಭರವಸೆಯ ಕಂಪನಿಗಳಿಗೆ ಬೆಂಬಲ ನೀಡುತ್ತಿದ್ದು, ಇವು 60 ಸೀಟುಗಳನ್ನು ಹೊಂದಿವೆ. ಇದರಿಂದ ಇಲ್ಲಿನ ತಂತ್ರಜ್ಞಾನ ವಲಯದ ಬೆಳವಣಿಗೆ ಹಾಗೂ ಆವಿಷ್ಕಾರಕ್ಕೆ ಸಾಕಷ್ಟು ನೆರವು ಸಿಗುತ್ತಿದೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ, ಐ.ಟಿ. ಸೇವೆಗಳು, ಗೇಮಿಂಗ್ ಉದ್ಯಮದ ಅನುಮತಿ ಸಹ ಎಸ್.ಟಿ.ಪಿ.ಐ. ಮೂಲಕವೇ ದೊರೆಯುತ್ತಿವೆ. ನಾವು ವಿದೇಶಿ ವ್ಯಾಪಾರ ನೀತಿ ಜಾರಿಗೆ ತರುತ್ತಿದ್ದು, ರಾಜ್ಯ ಸರ್ಕಾರಕ್ಕೆ ಹೊಸ ಐ.ಟಿ. ನೀತಿ ರೂಪಿಸಲು ನೆರವಾಗುತ್ತಿದ್ದೇವೆ. ದೇಶದ ಐ.ಟಿ. ಉದ್ಯಮ ಇಂದು 300 ಮಿಲಿಯನ್ ಡಾಲರ್‌ಗಳ ಗಾತ್ರಕ್ಕೆ ಬೆಳೆದಿದೆ. ಇದು ದೇಶದ ಆರ್ಥಿಕ ಕ್ರಾಂತಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
ಹಲವು ನಗರಗಳಲ್ಲಿ ಹಾಗೂ ಸ್ಥಳೀಯ ಆರ್ಥಿಕತೆಯಲ್ಲೂ ಐ.ಟಿ. ಕಾರ್ಯಪಡೆಯಿಂದ ಕ್ರಾಂತಿಯಾಗಿದೆ. ಹೀಗಾಗಿ ಎಸ್.ಟಿ.ಪಿ.ಐ. ಅನ್ನು ಎರಡು, ತೃತೀಯ ಹಂತದ ನಗರಗಳಲ್ಲಿಯೂ ಬೆಳೆಸಲಾಗುತ್ತಿದೆ. ದೇಶದಲ್ಲಿ 68 ಕೇಂದ್ರಗಳಿದ್ದು, ಕರ್ನಾಟಕದ ದಾವಣಗೆರೆಯು ಐದನೇ ಕೇಂದ್ರವಾಗಿದೆ. ದಾವಣಗೆರೆಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತಾಗಲು ಇದು ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.
100 ಸ್ಟಾರ್ಟಪ್‌ಗಳು ವರ್ಷಕ್ಕೆ ತಲಾ 25 ಸಾವಿರ ಯುವಜನರಿಗೆ ನೇರ ಅವಕಾಶ ನೀಡಲಿವೆ. ಡಿಜಿಟಲ್ ವಲಯಕ್ಕೆ ಶೇ. 20ರಷ್ಟು ರಾಷ್ಟ್ರೀಯ ಆದಾಯ ಹರಿದುಬರಲಿದೆ. ಹೀಗಾಗಿ ಕೌಶಲ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಉದ್ಯೋಗದಾತರಾಗಿ ಹೊರಹೊಮ್ಮಬೇಕು ಎಂದೂ ಆಶಿಸಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಕಾರ್ಯಕ್ರಮ ವ್ಯವಸ್ಥಾಪಕ ಸುವಿನ್ ನಾರಾಯಣ್ ಮಾತನಾಡಿ ಸ್ಟಾರ್ಟಪ್ ಕಂಪನಿಗಳು ಹೆಚ್ಚಿದಂತೆಲ್ಲ ಉದ್ಯೋಗಾವಕಾಶ ಹೆಚ್ಚಲಿವೆ. ದಾವಣಗೆರೆಯನ್ನು ಐಟಿ ವಲಯದ ಬ್ರಾೃಂಡ್ ಆಗಿಸುವತ್ತ್ತ ಚಿಂತನೆ ನಡೆಸಬೇಕಿದೆ. ಐದು ವರ್ಷದಲ್ಲಿ ಈ ನಗರವನ್ನು ಐಟಿ ತಾಣವಾಗಿಸಬೇಕಿದೆ. ಕೈಗಾರಿಕೆ, ಶೈಕ್ಷಣಿಕ ವಲಯದಲ್ಲಿ ಹೆಚ್ಚಿನ ಸಹಭಾಗಿತ್ವಕ್ಕೆ ಉತೇಜಿಸಬೇಕಿದೆ ಎಂದರು.
ಇಂಟೆಲ್ ಇಂಡಿಯಾದ ಕಾರ್ಯಾಚರಣೆ ವ್ಯವಸ್ಥಾಪಕ ಸಾಮ್ಯುಯೆಲ್ ದೊರೈರಾಜ್ ಮಾತನಾಡಿ, ಕೃತಕ ಬುದ್ಧಿಮತ್ತೆಯು ಜೀವನ ಸರಳೀಕೃತವಾಗಿಸಲು ಅನುಕೂಲವಾಗಿದೆ. ಎಲ್ಲ ನಾಗರಿಕರು, ಕಾರ್ಯಪಡೆಗೂ ಇದು ಅಗತ್ಯವಿದ್ದು ಇದರ ಮೂಲಕ ಕೊಡುಗೆ ನೀಡಬಹುದು ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಎಸ್‌ಟಿಪಿಐ ಬೆಳವಣಿಗೆ ಸಂಬಂಧ ವೆಬ್‌ಸೈಟ್ ತೆರೆಯಲಾಗುವುದು. 10 ಮೆಗಾವಾಟ್ ಸಾಮರ್ಥ್ಯದ ಡೇಟಾ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ನಿರ್ವಹಿಸಲಾಗುವುದು. ಎಸ್‌ಟಿಪಿಐ ಮತ್ತು ಕಿಯೋನಿಕ್ಸ್ ಸಂಸ್ಥೆಗಳಿಗೆ ತಲಾ ನಾಲ್ಕು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಗಾಲ್ಫ್ ಕೋರ್ಸ್ ತೆರೆಯಲು ಸಹ ಚಿಂತನೆ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ವೀರೇಶ್ ಪಟೇಲ್, ಡಾ. ಎಚ್.ಬಿ.ಅರವಿಂದ್, ಎಂ.ಸಿ.ಪ್ರಶಾಂತ್ ಇತರರಿದ್ದರು.
ಐಟಿ ಹಬ್‌ಗೆ ಪೂರಕ ವಾತಾವರಣ
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ದಾವಣಗೆರೆ ಜನರ ಕನಸು ಹಾಗೂ ಬೇಡಿಕೆಯಂತೆ ಐಟಿ ಪಾರ್ಕ್ ಸಾಕಾರವಾಗುತ್ತಿದೆ. ನಗರದ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ವಾರ್ಷಿಕ 5 ಸಾವಿರ ಪದವೀಧರರಿಗೆ ಇದು ಅನುಕೂಲವಾಗಲಿದೆ. ಹೆದ್ದಾರಿ ಪಕ್ಕದಲ್ಲೇ ಜಾಗ ದೊರೆತಿದ್ದು ಐಟಿ ಹಬ್ ಮಾಡಲು ಪೂರಕ ವಾತಾವರಣ ದೊರೆತಿದೆ ಎಂದರು.
ಎಸ್‌ಟಿಪಿಐ ಅಡಿಯಲ್ಲಿ ನಗರದಲ್ಲಿ ಡೇಟಾ ಕೇಂದ್ರವನ್ನು ಶುರು ಮಾಡುತ್ತಿದ್ದು, ಬಹಳಷ್ಟು ದಾಖಲೆಗಳ ಸಂಗ್ರಹಕ್ಕೆ ಹಾಗೂ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೂ ಅನುಕೂಲವಾಗಲಿದೆ. ಕೌಶಲಾಭಿವೃದ್ಧಿ ಕೇಂದ್ರದ ಮೂಲಕ ವಿದ್ಯಾರ್ಥಿಗಳಲ್ಲಿ ಮೆದು ಕೌಶಲಗಳ ತರಬೇತಿ ನೀಡಲಾಗುವುದು. ಎಸ್‌ಐಟಿಪಿ ದ್ವಿತೀಯ, ತೃತೀಯ ಹಂತದ ನಗರಗಳಲ್ಲಿ ಬೆಳೆದಲ್ಲಿ ಆರ್ಥಿಕ ಬಲವರ್ಧನೆ ಯಾರಿಂದಲೂ ತಡೆಯಲಾಗದು ಎಂದೂ ಹೇಳಿದರು.