ನಾಳೆಯಿಂದ ಜಿಎಂ ಲೀಗ್ ಸೀಸನ್ 2 ಕ್ರೀಡಾ ಹಬ್ಬ

1001274325_20251026003058860.jpg
Published on

ದಾವಣಗೆರೆ: ದಿ. ಜಿ.ಮಲ್ಲಿಕಾರ್ಜುನಪ್ಪ ಅವರ ಹೆಸರಿನಲ್ಲಿ ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಅ.27ರಿಂದ ನ. 7ರವರೆಗೆ ಐಪಿಎಲ್ ಮಾದರಿಯ ಜಿಎಂ ಲೀಗ್ ಸೀಸನ್ 2 ಕ್ರೀಡಾ ಹಬ್ಬ ನಡೆಯಲಿದೆ.

ಈ ಹಬ್ಬದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರ ವಿಭಾಗಗಳಲ್ಲಿ ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು ಪ್ರತಿ ತಂಡದಲ್ಲೂ ತಲಾ 2-3 ವಿದೇಶದ ಕ್ರೀಡಾಪಟುಗಳು ಭಾಗವಹಿಸುವರು ಎಂದು ವಿವಿಯ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಎಚ್.ಎಸ್. ಕಿರಣ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಎಂ ವಿವಿ ನಿರ್ದೇಶಕರು, ಡೀನ್‌ಗಳು, ಪ್ರಾಧ್ಯಾಪಕರು ಸೇರಿ 8 ಪ್ರಾಂಚೈಸಿ ತಂಡವಾಗಿ ಲೀಗ್‌ನಲ್ಲಿ ಭಾಗವಹಿಸುವರು. ದಾವಣಗೆರೆ ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಪ್ರೌಢಶಾಲೆಯಿಂದ ಹಿಡಿದು ಇಂಜಿನಿಯರಿಂಗ್, ವೈದ್ಯಕೀಯ, ಫಾರ್ಮಸಿ, ನರ್ಸಿಂಗ್ ಸೇರಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇವರನ್ನು ಬಿಡ್ ಮೂಲಕ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

ಕಳೆದ ಬಾರಿ 11 ದಿನಗಳ ಕಾಲ ಕ್ರಿಕೆಟ್, ವಾಲಿಬಾಲ್, ಖೋ-ಖೋ, ಥ್ರೋಬಾಲ್ ಸೇರಿ ವಿವಿಧ ಕ್ರೀಡೆಗಳನ್ನು ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಕ್ರೀಡಾ ಹಬ್ಬವನ್ನು ಯಶಸ್ವಿಯಾಗಿ ನಡೆಸಲಾಗಿತ್ತು ಎಂದರು.

ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಈ ಲೀಗ್ ನಡೆಸುತ್ತಿದ್ದು, ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್. ಕಿರಣ್‌ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ. ಅಜ್ಜಯ್ಯ ಲೀಗ್‌ನ ಜವಾಬ್ದಾರಿ ಹೊತ್ತಿದ್ದೇವೆ ಎಂದರು.

ಸೀಸನ್ 2ಗೆ ಅ.27 ರ ಮಧ್ಯಾಹ್ನ 2.30 ಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ.ಬಿ.ಎಸ್. ಸುನೀಲ್‌ಕುಮಾರ್ ಇತರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ನ.7ರ ಸಂಜೆ 5ಕ್ಕೆ ನಡೆಯುವ ಸಮಾರೋಪದಲ್ಲಿ ಪ್ರಥಮ ಬಹುಮಾನವಾಗಿ 10 ಸಾವಿರ, ದ್ವಿತೀಯ-7500 ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಎಂಯು ಮಾರ್ಕೆಟಿಂಗ್ ಮತ್ತು ಪ್ರಚಾರ ವಿಭಾಗದ ಡೀನ್ ಡಾ. ಟಿ.ಎಂ.ವೀರಗಂಗಾಧರಸ್ವಾಮಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ. ಅಜ್ಜಯ್ಯ, ಕ್ರೀಡಾ ಕಾರ್ಯದರ್ಶಿ ಎ.ಎಸ್.ಗುರುಶಂಕರ್, ಪ್ರಧಾನ ಕಾರ್ಯದರ್ಶಿ ರಾಹುಲ್ ಆರ್. ಗದಗಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net