14 ವರ್ಷದಲ್ಲಿ 5434 ಹಾವುಗಳಿಗೆ ಶ್ರೀರಕ್ಷೆ  ಉರಗ ರಕ್ಷಕನ ಸಮಾಜಸೇವೆ

1000344867.jpg
Published on

ಡಿ.ಎಂ.ಮಹೇಶ್, ದಾವಣಗೆರೆ
ಇವರು ಹಾವಾಡಿಗರಲ್ಲ; ಆದರೆ ಸರ್ಪಪ್ರೇಮಿ. ಕ್ರಮಬದ್ಧ ತರಬೇತಿ ಪಡೆದಿಲ್ಲವಾದರೂ ಸಲೀಸಾಗಿ ಹಾವನ್ನು ಹಿಡಿಯುವ ಕಲೆ ಇವರಿಗೆ ಸಿದ್ಧಿಸಿದೆ. ಹಲವು ಬಾರಿ ಹಾವು ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೊಳಗಾದರೂ ಉರಗಗಳನ್ನು ಕಾಪಾಡುವ ಹುಚ್ಚು ಕಡಿಮೆಯಾಗಿಲ್ಲ!
ಹೊತ್ತಲ್ಲದ ಹೊತ್ತಲ್ಲಿ ಆಹ್ವಾನ ಬಂದರೂ ಸರಿ. ವಿಶೇಷ ಸ್ಟಿಕ್, ಡಬ್ಬಿ, ಚೀಲ, ಟಾರ್ಚ್‌ನೊಂದಿಗೆ ಸಕಾಲಕ್ಕೆ ಹಾಜರಾಗಿ ಹಾವನ್ನು ಹಿಡಿದು ಸಮೀಪದ ಅರಣ್ಯ ಪ್ರದೇಶಗಳಲ್ಲಿ ಸುರಕ್ಷಿತವಾಗಿ ಬಿಡುವುದೇ ಈ ಉರಗಪ್ರೇಮಿ ಪಾಲಿಗೆ ಸಮಾಜಸೇವೆ.
ದಾವಣಗೆರೆ ಹೊರವಲಯದ ಆನೆಕೊಂಡ ಮಟ್ಟಿಕಲ್ಲು ನಿವಾಸಿ ಎ.ಎಸ್.ಬಸವರಾಜ್ ದಾವಣಗೆರೆ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಈ ಸೇವೆ ಸಲ್ಲಿಸುತ್ತಿದ್ದು, ಸ್ನೇಕ್ ಬಸಣ್ಣ ಎಂದೇ ಚಿರಪರಿಚಿತರಾಗಿದ್ದಾರೆ. ಕಳೆದ 14 ವರ್ಷದಲ್ಲಿ 5434 ಹಾವುಗಳನ್ನು ರಕ್ಷಿಸಿದ್ದನ್ನು  ಅವರೇ ಬರೆದಿಡುವ ಡೈರಿ ನೆನಪಿಸುತ್ತದೆ.
ನಾಗರಹಾವು, ಕಡ್ಡಿಹಾವು, ಹಸಿರುಹಾವು, ರಾಮಬಾಣ, ಕೊಳಕುಮಂಡಳ, ಊರು ಮಂಡಲ, ಮಳೆಹೊಡ್ಕ, ಕಟ್ಟುಹಾವು ಮೊದಲಾದ ಬಗೆಯ ಹಾವುಗಳನ್ನು ಹಿಡಿದಿದ್ದಾಗಿ ಹೇಳುವ ಅವರು ಯಾರಿಂದಲೂ ಹಣದ ಫಲಾಪೇಕ್ಷೆ ಬಯಸಿಲ್ಲ.
‘ಹಾವು ಹಿಡಿದಿದ್ದಕ್ಕೆ ಕೆಲವರು ಐವತ್ತು, ನೂರು ರೂ. ಕೊಟ್ಟಿದ್ದಾರೆ. ಒಮ್ಮೆ ಒಬ್ಬರು 501 ರೂ.ಗಳನ್ನು ಬಟ್ಟೆ ಹಾಗೂ ಎಲೆ ಅಡಕೆ ಜತೆಗೇ ನೀಡಿದ್ದೇ ಹೈಯೆಸ್ಟು! ಮೊದಲೆಲ್ಲ ಸೈಕಲ್‌ನಲ್ಲೇ ಹೋಗುತ್ತಿದ್ದೆ. ಪರಿಚಯಸ್ಥರು ನೀಡಿದ ಹಳೆಯ ಹೀರೊಹೊಂಡಾ ಬೈಕ್ ಈಗ ನೆರವಾಗಿದೆ. ಅರಣ್ಯ ಪ್ರದೇಶಕ್ಕೆ ತೆರಳಿ ಹಾವನ್ನು ಬಿಟ್ಟು ಬರಲು ಪೆಟ್ರೋಲ್ ವೆಚ್ಚ ನೀಡಿದರೂ ಸರಿ, ಇಲ್ಲವಾದರೂ ಸರಿ, ನನ್ನ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.
ಹಾವು ಕಚ್ಚಿದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಹೋದಲ್ಲೆಲ್ಲ ತಿಳಿ ಹೇಳುವ ಬಸವರಾಜ್, ಎಲ್ಲ ಹಾವುಗಳೂ ವಿಷಕಾರಿಯಲ್ಲ. ಕೆಲವರು ಭಯದಿಂದ ಸಾಯುತ್ತಾರೆ, ವಿಷವಲ್ಲದ ಹಾವು ಕಚ್ಚಿದರೆ ಯಾರೂ ಸಾಯುವುದಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಡುತ್ತಿದ್ದಾರೆ. ಎಲ್ಲಾದರೂ ಹಾವು ಕಂಡರೆ ಕೊಲ್ಲದೆ ಹಾವು ಹಿಡಿಯುವವರಿಗೆ ಹೇಳಿ ರಕ್ಷಿಸಿ ಎಂದೂ ಮನವಿ ಮಾಡುತ್ತಿದ್ದಾರೆ.
ಈ ಹಿಂದೆ ಗಣೇಶ ಮಿಲ್‌ನಲ್ಲಿ ಮೆಕ್ಯಾನಿಕ್ ಆಗಿದ್ದ ಬಸವರಾಜ್, ಮಿಲ್‌ನಲ್ಲಿ ಕಾಣಿಸಿಕೊಂಡ ಹಾವು ಹಿಡಿಯುತ್ತಲೇ ಅದನ್ನೇ ಪ್ರಧಾನ ವೃತ್ತಿಯಾಗಿಸಿಕೊಂಡರು. ಕರೆ ಬಂದರೆ ಮಿಲ್‌ಗಳಲ್ಲಿ ಒಮ್ಮೊಮ್ಮೆ ಯಂತ್ರೋಪಕರಣ ದುರಸ್ತಿ ಮಾಡಿಕೊಡುತ್ತಿದ್ದಾರೆ.
ನಗರಪಾಲಿಕೆಯಿಂದ ರಾಜ್ಯೋತ್ಸವ ಸನ್ಮಾನ, ಶ್ರೀಶೈಲಮಠದಲ್ಲಿ ಕಾಯಕಯೋಗಿ ಬಸವಶ್ರೀ ಪ್ರಶಸ್ತಿ ಸೇರಿ ಸಂಘ ಸಂಸ್ಥೆಗಳು ಇವರ ಸೇವೆ ಗುರುತಿಸಿ ಗೌರವಿಸಿವೆ.  ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಪಾಲಿಕೆ ಆಶ್ರಯಮನೆ ನೀಡುವಾಗ ನಮ್ಮಂಥವರನ್ನು ಗುರ್ತಿಸಬೇಕು ಎಂಬುದು ಅವರಾಶಯ.
ಮಗ ಹೇಮಂತರಾಜ್ ಮೆಡಿಕಲ್ ರೆಪ್ ಆಗಿದ್ದು, ಮಗಳು ಶಾಂಭವಿ ಬಿಕಾಂ ಓದುತ್ತಿದ್ದಾರೆ. ಬಸವರಾಜ್ ಅವರ ಪತ್ನಿ ಮಂಜುಳಾ ಸಮೀಪದ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತ ನೆರವಾಗಿದ್ದಾರೆ.
ಹಾವು ಹಿಡಿಯುವವರಿಗೆ ಅರಣ್ಯ ಇಲಾಖೆ ಅಥವಾ ನಗರಪಾಲಿಕೆಯಿಂದ ಪರವಾನಗಿ ನೀಡಬೇಕು. ಈ ಸಂಬಂಧ ಗುರುತಿನ ಚೀಟಿ ನೀಡಬೇಕೆಂದು ಆಗ್ರಹಿಸಿ ಮೂರು ವರ್ಷ ಅಲೆದಾಡಿದರೂ ಕೆಲಸವಾಗುತ್ತಿಲ್ಲ. ಹಾವು ಹಿಡಿಯುವರು ಹಾವು ಕಡಿತದಿಂದ ಗಾಯಗೊಂಡಲ್ಲಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂಬುದು ಬಸವರಾಜ್ ಆಗ್ರಹ. (ಬಸವರಾಜ್ ಅವರ ಮೊ.ಸಂ. 9880314026)
---
ಸಮಾಜಸೇವೆ ಎಂದು ಭಾವಿಸಿ ಹಾವುಗಳ ಸಂರಕ್ಷಣೆ ಮಾಡುತ್ತಿದ್ದೇನೆ. ಹಾವು ಮೂರು ಬಾರಿ ಕಚ್ಚಿ ಗಾಯಗೊಳಿಸಿದಾಗ ಚಿಕಿತ್ಸೆ ಪಡೆದಿದ್ದರಿಂದ ಕೆಲವರು ಈ ಕೆಲಸ ಕೈಬಿಡಲು ಹೇಳಿದ್ದರು. ನನ್ನ ಜೀವ ಹೋದರೂ ಅದರಲ್ಲೇ ಹೋಗಲಿ, ಈ ಸೇವೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ.
ಎ.ಎಸ್.ಬಸವರಾಜ್
ಉರಗಪ್ರೇಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net